ಹಿರಿಯ ರಾಜಕಾರಣಿ, ಕಾಂಗ್ರೆಸ್ ಮುಖಂಡ ಎಂ.ಪಿ.ಪ್ರಕಾಶ್ ಅವರಿಗೆ ಅವಹೇಳಕಾರಿಯಾಗಿ ಮಾತನಾಡಿರುವುದನ್ನು ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆ ವ್ಯಕ್ತವಾಗುತ್ತಿದ್ದು, ಮತ್ತೊಂದೆಡೆ ಸಾವು ಎಲ್ಲರಿಗೂ ಖಚಿತ ಯಾರೂ ಚಿರಂಜೀವಿಗಳಲ್ಲ ಎಂದು ರೆಡ್ಡಿ ಮಾತಿಗೆ ಪ್ರಕಾಶ್ ತಿರುಗೇಟು ನೀಡಿದ್ದಾರೆ.
ಹುಟ್ಟಿದವರು ಸಾಯಲೇಬೇಕು. ಹಾಗಾಗಿ ಇನ್ನೊಬ್ಬರ ಬಗ್ಗೆ ಕೆಟ್ಟದಾಗಿ ಮಾತನಾಡುವುದು ಸಭ್ಯರ ಲಕ್ಷಣವಲ್ಲ. ಜವಾಬ್ದಾರಿಯುತ ಸ್ಥಾನದಲ್ಲಿ ಇದ್ದವರು ಸ್ಥಾನಕ್ಕೆ ತಕ್ಕಂತೆ ಮಾತನಾಡಬೇಕು ಎಂದು ಅವರು ನಗರದಲ್ಲಿನ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದರು.
ಬಹಿರಂಗವಾಗಿ ರೆಡ್ಡಿಗಳು ಈ ರೀತಿ ಮಾತನಾಡುವುದರಿಂದ ಅವರ ಅಭಿರುಚಿ ಬಯಲಾಗಿದೆ. ನನ್ನ ಹೇಳಿಕೆಯನ್ನು ತಿರುಚಿ ನನ್ನ ವಿರುದ್ಧವೇ ಆರೋಪ ಮಾಡುತ್ತಿದ್ದಾರೆ ಎಂದು ದೂರಿದರು. ಬಳ್ಳಾರಿಯ ರೆಡ್ಡಿಗಳು ಹಣ, ಅಧಿಕಾರದ ಮದದಿಂದ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಇದು ಅವರ ಘನತೆಗೆ ತಕ್ಕದಲ್ಲ ಎಂದರು.
ಬಳ್ಳಾರಿ ಸಚಿವರಿಗೆ ಬಿಜೆಪಿ ನಾಯಕಿ ಸುಷ್ಮಾ ಸ್ವರಾಜ್ ಅವರನ್ನು ಪರಿಚಯಿಸಿ ಕೊಟ್ಟಿದ್ದೇ ನಾನು. ಹಾಗಂತ ನಾವ್ಯಾರು ಭೀಷ್ಮನಂತೆ ಇಚ್ಚಾ ಮರಣಿಗಳಲ್ಲ. ಒಂದಲ್ಲ ಒಂದು ದಿನ ಸಾಯಲೇಬೇಕು. ಅದನ್ನು ಕೂಡ ರೆಡ್ಡಿಗಳು ಮನಗಾಣಬೇಕು ಎಂದು ತಿರುಗೇಟು ನೀಡಿದರು.
ಮಾಜಿ ಸಚಿವ ಎಂ.ಪಿ.ಪ್ರಕಾಶ್ ಅವರು ಸಾವಿನ ದವಡೆಯಲ್ಲಿದ್ದಾಗಲೂ ಕೂಡ ಸತ್ಯ ಹೇಳಬೇಕಿತ್ತು. ಸ್ಮಶಾನಕ್ಕೆ ಹೋಗುವ ಮನುಷ್ಯ ಸುಷ್ಮಾ ಸ್ವರಾಜ್ ಬಗ್ಗೆ ಆರೋಪ ಹೊರಿಸಿ ಮಾತನಾಡಬಾರದಿತ್ತು ಎಂದು ಸಚಿವ ಜನಾರ್ದನ ರೆಡ್ಡಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುವಾಗ ಟೀಕಿಸಿದ್ದರು. ತದನಂತರ ರೆಡ್ಡಿ ಹೇಳಿಕೆ ವಿರುದ್ಧ ಹೂವಿನಹಡಗಲಿ ಸೇರಿದಂತೆ ರಾಜ್ಯದ ವಿವಿಧೆಡೆ ತೀವ್ರ ಪ್ರತಿಭಟನೆ ವ್ಯಕ್ತವಾಗಿತ್ತು.