ರಾಜ್ಯದ, ದೇಶದ ಜನರಿಗೆ ಒಳ್ಳೆಯದಾಗಲಿ, ಮಳೆ, ಬೆಳೆ ಉತ್ತಮ ರೀತಿಯಲ್ಲಿ ಆಗಲಿ ಎಂದು ಲೋಕ ಕಲ್ಯಾಣಕ್ಕಾಗಿ ಇಲ್ಲಿನ ಶಿವ ಸಿದ್ದ ಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ಹೈಟೆಕ್ ಶೈಲಿಯಲ್ಲಿ ತಪಸ್ಸು ಮಾಡಲು ಆರಂಭಿಸಿದ್ದಾರೆ!
ಹೈಟೆಕ್ ತಪಸ್ಸು!: ಗುರುವಾರ ಬೆಳಿಗ್ಗೆ ಹುಬ್ಬಳ್ಳಿಯ ಹದ್ದಿನಗುಡ್ಡದಲ್ಲಿ ನಿರ್ಮಿಸಿರುವ ಸಮಾಧಿ ಬಳಿಗೆ ಸ್ವಾಮಿ ಆಗಮಿಸಿದಾಗ ಸುತ್ತಲೂ ಭಕ್ತರ ದಂಡು ನೆರೆದಿತ್ತು. ತಾನು ಲೋಕಕಲ್ಯಾಣಕ್ಕಾಗಿ ಸುಮಾರು 48 ದಿನಗಳ ಕಾಲ ಅನ್ನ-ಆಹಾರ ತ್ಯಜಿಸಿ ತಪಸ್ಸು ಮಾಡುತ್ತಿದ್ದೇನೆ ಎಂದು ಘೋಷಿಸಿದ್ದರು. ಈ ಸಂದರ್ಭದಲ್ಲಿ ಸ್ವಾಮಿ ಭಕ್ತರತ್ತ ಕೈಬೀಸಿ ಆಶೀರ್ವಾದ ನೀಡಿದರು. ನಂತರ ಐಶಾರಾಮಿ ಗುಹೆಯೊಳಗೆ ತೆರಳಿದರು. ಇನ್ನು 48 ದಿನಗಳ ನಂತರ ತಾನು ಭಕ್ತರಿಗೆ ದರ್ಶನ ಕೊಡುವುದಾಗಿ ಸ್ವಾಮಿ ಹೇಳಿದರು.
ಆದರೆ ಹೈಟೆಕ್ ಸ್ವಾಮಿ ತಪಸ್ಸಿಗಾಗಿ 8 ಅಡಿ ಅಗಲ, 8 ಅಡಿ ಆಳದ ಗುಹೆಯೊಂದನ್ನು ತೋಡಲಾಗಿತ್ತು. ಈ ಗುಹೆಯಲ್ಲಿ ಫ್ಯಾನ್, ಉಸಿರಾಡಲು ನಾಲ್ಕು ಪ್ಲ್ಯಾಸ್ಟಿಕ್ ಪೈಪ್ ಅಳವಡಿಕೆ, ಟ್ಯೂಬ್ ಲೈಟ್, ಬಲ್ಪ್, ಸ್ನಾನ ಮಾಡಲು ಟೈಲ್ಸ್ ಹಾಕಿರುವ ಐಶಾರಾಮಿ ಕೋಣೆ, ಬೆಚ್ಚಗೆ ಮಲಗಲು ಮಂಚ, ಬೆಡ್ ವ್ಯವಸ್ಥೆ ಮಾಡಲಾಗಿದೆ!
ತಾನು ಗುಹೆಯಲ್ಲಿ ಮನುಕುಲದ ಕಲ್ಯಾಣಕ್ಕಾಗಿ 48 ದಿನಗಳ ಕಾಲ ತಪಸ್ಸು ಮಾಡುತ್ತೇನೆ. ಈ ಸಂದರ್ಭದಲ್ಲಿ ಹಾಲು ಮತ್ತು ಹಣ್ಣನ್ನು ಮಾತ್ರ ಸೇವಿಸುತ್ತೇನೆ. ಇನ್ನುಳಿದಂತೆ ಅನ್ನ, ಆಹಾರ ಸೇವಿಸೋಲ್ಲ, ಅಷ್ಟೇ ಅಲ್ಲ ಈ ಸಂದರ್ಭದಲ್ಲಿ ಭಕ್ತರಿಗೆ ದರ್ಶನಕ್ಕೆ ಅವಕಾಶವಿಲ್ಲ. 48 ದಿನಗಳ ಅಖಂಡ ತಪಸ್ಸಿನ ನಂತರ ನಾನೇ ಹೊರಗೆ ಬರುತ್ತೇನೆ ಎಂದು ಅಭಯ ನೀಡಿ ಸ್ವಾಮಿ ಹೈಟೆಕ್ ಗುಹೆ ಪ್ರವೇಶಿಸಿ ತಪಸ್ಸಿಗೆ ಕುಳಿತಿದ್ದಾರೆ. ಇತ್ತ ಹೊರಗಡೆ ಭಕ್ತರು ಜಯಘೋಷ ಹಾಕಿ, ಶುಭ ಹಾರೈಸಿದರು.
ಈ ಪ್ರಚಾರ ಪ್ರಿಯ ಸ್ವಾಮಿ ಇಂತಹ ಗಿಮಿಕ್ ಮಾಡುತ್ತಿರುವುದು ಹೊಸದೇನಲ್ಲ, ಕಳೆದ ವರ್ಷ ಬೆಳಗಾವಿ ಜಿಲ್ಲೆಯಲ್ಲಿ ತಾನು ಘೋರ ತಪಸ್ಸು ಮಾಡುವುದಾಗಿ ಗುಹೆ ಹೊಕ್ಕಿದ್ದರು.ಆಗ ಸ್ವಾಮಿ ಗುಹೆಗೆ ತೆರಳುವ ಮುನ್ನ ಇದ್ದ ಬಟ್ಟೆ, ವಾಪಸ್ ಬರುವಾಗ ಬದಲಾಗಿತ್ತು. ಅಷ್ಟೇ ಅಲ್ಲ ಉದ್ದುದ್ದ ಬೆಳೆದಿದ್ದ ಗಡ್ಡ ಕೂಡ ಮಾಯವಾಗಿತ್ತು. ತಪಸ್ಸಿನ ನಂತರ ಸುದ್ದಿಗಾರರು ಪ್ರಶ್ನಿಸಿದಾಗ ಸ್ವಾಮಿ ಹಾರಿಕೆಯ ಉತ್ತರ ಕೊಟ್ಟು ನುಣುಚಿಕೊಂಡಿದ್ದರು. ಇದೀಗ ಮತ್ತೆ ಲೋಕಕಲ್ಯಾಣಕ್ಕಾಗಿ ಸ್ವಾಮಿ ಹೈಟೆಕ್ ತಪಸ್ಸು ಆರಂಭಿಸಿದ್ದಾರೆ!