ಉದ್ಯೋಗ ವಂಚಿತರಿಗೆ ಪರ್ಯಾಯ ವ್ಯವಸ್ಥೆ: ಮುಮ್ತಾಜ್ ಅಲಿಖಾನ್
ಹಾಸನ, ಶುಕ್ರವಾರ, 13 ಆಗಸ್ಟ್ 2010( 15:29 IST )
ಗೋಹತ್ಯೆ ನಿಷೇಧ ಮಸೂದೆ ಜಾರಿಗೆ ಬಂದರೆ, ಉದ್ಯೋಗ ವಂಚಿತರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಸರಕಾರ ಕ್ರಮ ಕೈಗೊಳ್ಳಬೇಕು ಎಂದು ಅಲ್ಪಸಂಖ್ಯಾತ ಕಲ್ಯಾಣ, ಹಜ್,ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಖಾತೆ ಸಚಿವ ಡಾ.ಮುಮ್ತಾಜ್ ಅಲಿಖಾನ್ ಹೇಳಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿ, ಗೋಹತ್ಯೆ ನಿಷೇಧಕ್ಕೆ ಮುಸ್ಲೀಮರ ವಿರೋಧ ಇದೆ ಎನ್ನುವುದು ಸರಿಯಲ್ಲ. ಮೊಘಲರು, ಹೈದರಾಲಿ, ಟಿಪ್ಪು ಆಡಳಿತದಲ್ಲಿಯೂ ಗೋವುಗಳಿಗೆ ರಕ್ಷಣೆ ಇತ್ತು ಎಂದರು.
ಯಾವುದೇ ಮಸೂದೆಯನ್ನು ಜಾರಿಗೆ ತರುವಾಗ ಪರ ಮತ್ತು ವಿರೋಧ ಅಭಿಪ್ರಾಯ ವ್ಯಕ್ತವಾಗುವುದು ಸಹಜ. ಗೋ ಹತ್ಯೆ ನಿಷೇಧ ಮಸೂದೆ ಜಾರಿಗೆ ತಂದರೆ, ಆಹಾರ ಮತ್ತು ಉದ್ಯೋಗ ಸಮಸ್ಯೆ ಎದುರಾಗಲಿದೆ ಎನ್ನುವುದು ಸರಕಾರದ ಗಮನಕ್ಕೆ ಬಂದಿದೆ. ಇದಕ್ಕೆ ಪರ್ಯಾಯ ವ್ಯವಸ್ಥೆಗೆ ವಕ್ಫ್ ಮಂಡಳಿಯೂ ಚಿಂತನೆ ಮಾಡುತ್ತಿದೆ ಎಂದರು.
ಗೋಹತ್ಯೆ ಈಗ ಜಾರಿಗೆ ತಂದ ಮಸೂದೆ ಅಲ್ಲ. 1956ರಿಂದಲೂ ಈ ಮಸೂದೆ ಇದೆ. ಅದಕ್ಕೆ ತಿದ್ದುಪಡಿ ತರಲಾಗಿದೆ ಅಷ್ಟೆ ಎಂದು ಹೇಳಿದರು. ಗೋ ಹತ್ಯೆ ನಿಷೇಧ ಮಸೂದೆಗೆ ರಾಷ್ಟ್ರಪತಿ ಅಂಕಿತ ದೊರೆಯುವ ವಿಶ್ವಾಸ ಇದೆ. ಅಂಕಿತ ದೊರೆಯದೆ ಇದ್ದರೆ, ಸುಗ್ರೀವಾಜ್ಞೆ ತರುವ ಬಗ್ಗೆ ಇನ್ನೂ ತೀರ್ಮಾನ ಆಗಿಲ್ಲ ಎಂದರು.