ಗಣಿ ಬಗ್ಗೆ ಕಾಂಗ್ರೆಸ್ ನಿಲುವು ಸ್ಪಷ್ಟವಾಗಲಿ: ಎಚ್.ಡಿ.ರೇವಣ್ಣ
ಹಾಸನ, ಶುಕ್ರವಾರ, 13 ಆಗಸ್ಟ್ 2010( 15:31 IST )
ಸಂಸತ್ತಿನಲ್ಲಿ ಗಣಿಗಾರಿಕೆ ಬಗೆಗಿನ ಚರ್ಚೆ ಸಂದರ್ಭದಲ್ಲಿ ಕಾಂಗ್ರೆಸ್ ನಿಲುವು ಏನೆಂಬುದನ್ನು ಸ್ಪಷ್ಟಪಡಿಸಲಿ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ರೇವಣ್ಣ ಒತ್ತಾಯಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಪ್ರಧಾನಿ, ಸಂಸದ ದೇವೇಗೌಡರು ನಿಯಮ 193ರ ಅಡಿಯಲ್ಲಿ ಚರ್ಚೆಗೆ ಅವಕಾಶ ಕೋರಿದ್ದಾರೆ. ಆ ಸಂದರ್ಭದಲ್ಲಿ ಕಾಂಗ್ರೆಸ್ ಯಾವ ರೀತಿ ನಡೆದುಕೊಳ್ಳಲಿದೆ ಎನ್ನುವುದು ಮುಖ್ಯ ಎಂದರು.
ವಿಧಾನಸಭೆಯಲ್ಲಿ ಗಣಿಗಾರಿಕೆ ಚರ್ಚೆಗೆ ಮೊದಲೇ ಮನವಿ ನೀಡಿದ್ದರೂ, ಪ್ರತಿಪಕ್ಷ ಕಾಂಗ್ರೆಸ್‌ಗೆ ಅವಕಾಶ ನೀಡಲಾಗಿತ್ತು. ಆದರೂ ಗಣಿಗಾರಿಕೆ ಹೋರಾಟಕ್ಕೆ ಸದನದಲ್ಲಿ ಜೆಡಿಎಸ್ ಸಾಥ್ ನೀಡಿತ್ತು. ಈ ಬಗ್ಗೆ ರಾಷ್ಟ್ರಪತಿ, ಪ್ರಧಾನಿ ಭೇಟಿ ಮಾಡುವ ಸಲಹೆ ಕೊಟ್ಟಿದ್ದರೂ, ಅದಕ್ಕೆ ಮನ್ನಣೆ ಕೊಡಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಬಳ್ಳಾರಿ ಪಾದಯಾತ್ರೆಯಿಂದ ಕಾಂಗ್ರೆಸ್ ಸಾಧಿಸಿದ್ದಾದರೂ ಏನೆಂದು ಪ್ರಶ್ನಿಸಿದ ಅವರು, ಈಗ ಪ್ರಧಾನಿ, ರಾಷ್ಟ್ರಪತಿ ಭೇಟಿಗೆ ಹೋಗೋಣ ಅನ್ನುತ್ತಿದ್ದಾರೆ. ಆಗಲೇ ಈ ಕೆಲಸ ಮಾಡಿದ್ದರೆ ಏನಾಗುತ್ತಿತ್ತು? ಎಂದರು.
ಬಿಜೆಪಿ ಮತ್ತು ಕಾಂಗ್ರೆಸ್ ಅವಧಿಯಲ್ಲಿ ಅದಿರು ಅಕ್ರಮ ಸಾಗಣೆ ಆಗಿದೆ ಎನ್ನುವುದನ್ನು ಸಿಎಂ ಸದನದಲ್ಲಿಯೇ ಅಧಿಕೃತವಾಗಿ ತಿಳಿಸಿದ್ದಾರೆ. ಮುಂದೇನು ಆಗಬೇಕು ಎನ್ನುವುದು ಮುಖ್ಯ. ಅದನ್ನು ಬಿಟ್ಟು ಪಾದಯಾತ್ರೆ ಮಾಡಿ ಸಾಧಿಸಿದ್ದಾದರೂ ಏನು? ರಾಜ್ಯದಲ್ಲಿ ಮಹಾತ್ಮ ಗಾಂಧಿ ಕಾಂಗ್ರೆಸ್ ಇಲ್ಲ. ನಕಲಿ ಕಾಂಗ್ರೆಸ್ ಇದೆ ಎಂದರು.