ನೆರೆ ಸಂತ್ರಸ್ತರಿಗಾಗಿ ನಿರ್ಮಿಸುತ್ತಿರುವ ಶೇ.90ರಷ್ಟು ಮನೆಗಳು ಡಿಸೆಂಬರ್ ಕೊನೆಗೆ ಪೂರ್ಣಗೊಳ್ಳದಿದ್ದರೆ ಸಚಿವ ಸ್ಥಾನದಿಂದ ನಿರ್ಗಮಿಸುತ್ತೇನೆ ಎಂದು ವಸತಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಹೇಳಿದರು.
'ನಮ್ಮ ಮನೆ' ಯೋಜನೆಯ ಮನೆಗಳ ನಿರ್ಮಾಣದ ಶಂಕುಸ್ಥಾಪನಾ ಸಮಾರಂಭದ ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು, ಮನೆಗಳ ಕಾಮಗಾರಿ ಭರದಿಂದ ಸಾಗಿದೆ. ಈಗಾಗಲೇ 5000 ಮನೆಗಳ ಕಾಮಗಾರಿ ಪೂರ್ಣಗೊಂಡಿದೆ. 31 ಸಾವಿರ ಮನೆಗಳು ನಿರ್ಮಾಣ ಹಂತದಲ್ಲಿವೆ. ಡಿಸೆಂಬರ್ ವೇಳೆಗೆ ಶೇ.90ರಷ್ಟು ಮನೆಗಳು ಸಿದ್ಧವಾಗದಿದ್ದರೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ. ಯಾರೇ ಆಗಲಿ ಕಟ್ಟಿರುವ ಮನೆಗಳನ್ನು ನೋಡಿದರೆ ಸಂತಸವಾಗುತ್ತದೆ. ಕಾಮಗಾರಿಯ ಗುಣಮಟ್ಟ ತೃಪ್ತಿ ನೀಡುತ್ತದೆ ಎಂದರು.
ತಮಿಳುನಾಡು ಹಾಗೂ ಗುಜರಾತ್‌ನಲ್ಲಿ ಪ್ರಕೃತಿ ವಿಕೋಪ ಸಂಭವಿಸಿದ ಸಂದರ್ಭದಲ್ಲಿ ಸಂತ್ರಸ್ತರಿಗೆ ವಸತಿ ಸೇರಿದಂತೆ ಎಲ್ಲ ಸೌಲಭ್ಯಗಳನ್ನು ಕಲ್ಪಿಸಲು 3ರಿಂದ 4 ವರ್ಷ ಬೇಕಾಯಿತು. ಆದರೆ ನಮ್ಮ ರಾಜ್ಯದಲ್ಲಿ ತೀವ್ರ ಗತಿಯಲ್ಲಿ ಮನೆ ನಿರ್ಮಾಣ ನಡೆದಿದೆ. ಒಟ್ಟು 63,000 ಮನೆಗಳನ್ನು ನಿರ್ಮಿಸಲಾಗುವುದು ಎಂದು ವಿವರಿಸಿದರು.
ಕಾಂಗ್ರೆಸ್ ನಡೆಸಿದ್ದು ಪಾಪ ಪ್ರಾಯಶ್ಚಿತದ ಪಾದಯಾತ್ರೆ. ಕಾಂಗ್ರೆಸ್ಸಿಗರು ಮಾಡಿದ ಪಾಪವನ್ನು ಕಳೆದುಕೊಳ್ಳಲು ಪಾದಯಾತ್ರೆ ನಡೆಸಿದರು. ಅವರ ಪಾಪ ಆರಂಭವಾಗಿದ್ದೇ ಬಳ್ಳಾರಿಯಲ್ಲಿ. ಆದ್ದರಿಂದ ಬಳ್ಳಾರಿಗೆ ಪಾದಯಾತ್ರೆ ಕೈಗೊಂಡರು ಎಂದು ಟೀಕಿಸಿದರು.