ಸಂಸತ್ ಸದಸ್ಯರ ಸಂಬಳ ಏರಿಕೆಯ ಖುಷಿ ಸುದ್ದಿಯ ಬೆನ್ನಲ್ಲೇ ಇದೀಗ ಬೆಂಗಳೂರು ಮಹಾನಗರ ಪಾಲಿಕೆಯ ಮೇಯರ್, ಉಪ ಮೇಯರ್ ಒಳಗೊಂಡಂತೆ 198 ಸದಸ್ಯರಿಗೆ ಇನ್ಮುಂದೆ ಬಂಪರ್ ಸಂಬಳ ದೊರೆಯಲಿದೆ.
ಬೆಂಗಳೂರು ಮಹಾನಗರ ಪಾಲಿಕೆ ಈಗ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಾಗಿ ಮಾರ್ಪಾಡುಗೊಂಡಿದೆ. ಬಿಎಂಪಿ ಇದ್ದಾಗ ಮೇಯರ್‌ಗೆ ಹತ್ತು ಸಾವಿರ ಸಂಬಳ. ಈಗ ಅದು 30ಸಾವಿರ ರೂ.ಗೆ ಏರಲಿದೆ. ಉಪಮೇಯರ್ ವೇತನ ಐದು ಸಾವಿರದಿಂದ 20 ಸಾವಿರಕ್ಕೆ ಏರಲಿದೆ. ಇನ್ನು ಸದಸ್ಯರಿಗಿದ್ದ 5 ಸಾವಿರ ವೇತನ 15 ಸಾವಿರ ರೂ.ಗೆ ಏರಲಿದೆ.
ಬಿಬಿಎಂಪಿ ಮೇಯರ್, ಸದಸ್ಯರಿಗೆ ಕೇವಲ ಇಷ್ಟೇ ಅಲ್ಲ, ಪಾಲಿಕೆಯಲ್ಲಿ ಮಾಸಿಕ ಸಭೆ ಸೇರಿದಂತೆ ಆಗಾಗ ವಿವಿಧ ವಿಷಯಗಳಿಗೆ ಸಭೆ ನಡೆಯುತ್ತಲೇ ಇರುತ್ತದೆ. ಹಾಗಾಗಿ ಒಂದು ಸಭೆಯಲ್ಲಿ ಪಾಲ್ಗೊಂಡರೆ ಈ ಹಿಂದೆ 200 ರೂ. ದೊರೆಯುತ್ತಿತ್ತು, ಈಗ 500 ರೂ. ಲಭಿಸಲಿದೆ. ಅಲ್ಲದೆ, ಸ್ಥಾಯಿ ಸಮಿತಿ ಸಭೆಗಳು ನಡೆದಾಗ ಒಂದೊಂದು ಸಭೆಗೆ 700 ರೂ. ಪಡೆಯಲಿದ್ದಾರೆ.
ಬಿಬಿಎಂಪಿ ಸದಸ್ಯರು ಸುಮ್ಮನೆ ಬರಲು ಸಾಧ್ಯವೆ, ಅದಕ್ಕಾಗಿ ಸಂಚಾರಿ ಭತ್ಯೆ ನೀಡಬೇಕು. ಈ ಮೊದಲು 750 ರೂ. ಇತ್ತು. ಇದೀಗ 7ಸಾವಿರ ರೂಪಾಯಿಗೆ ಏರಿದೆ! ಇನ್ನುಳಿದಂತೆ ಟೆಲಿಫೋನ್, ಮೊಬೈಲ್ ಬಿಲ್‌ಗಾಗಿ ಹಿಂದೆಲ್ಲಾ 500 ರೂ.ಮಾತ್ರ ನೀಡಲಾಗುತ್ತಿತ್ತು. ಅದು ಈಗ 5ಸಾವಿರ ರೂಪಾಯಿಗೆ ಹೆಚ್ಚಳವಾಗಿದೆ.