ರಾಜಕೀಯ ವೈಷಮ್ಯ: ಜೆಡಿಎಸ್ ದಾಳಿಗೆ ಕಾಂಗ್ರೆಸ್ ಮುಖಂಡನ 'ಕೈ' ಕಟ್!
ಮಂಡ್ಯ, ಶನಿವಾರ, 14 ಆಗಸ್ಟ್ 2010( 12:28 IST )
ರಾಜಕೀಯದ ವೈಷಮ್ಯದ ಹಿನ್ನೆಲೆಯಲ್ಲಿ ಗುಂಪು ಘರ್ಷಣೆ ನಡೆದ ಪರಿಣಾಮ ಕಾಂಗ್ರೆಸ್ ಕಾರ್ಯಕರ್ತನ ಕೈ ಕತ್ತರಿಸಿದ್ದು, ಮೂರು ಮನೆಗಳಿಗೆ, ಐದು ಬೈಕ್‌ಗಳಿಗೆ ಬೆಂಕಿ ಹಚ್ಚಿರುವ ಘಟನೆ ಶುಕ್ರವಾರ ಮದ್ದೂರು ತಾಲೂಕಿನ ಬಿಕ್ಕಳೆಲೆ ಗ್ರಾಮದಲ್ಲಿ ನಡೆದಿದೆ.
ಗ್ರಾಮ ಪಂಚಾಯತ್ ಚುನಾವಣೆ ಪ್ರಾರಂಭವಾದ ದಿನದಿಂದಲೇ ಬಿಕ್ಕಳೆಲೆ ಗ್ರಾಮದಲ್ಲಿ ರಾಜಕೀಯ ವೈಷಮ್ಯ ಭುಗಿಲೆದ್ದಿತ್ತು. ಅದರ ಪರಿಣಾಮ ಎಂಬಂತೆ ನಿನ್ನೆ ಸಂಜೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತ ಪರಮೇಶ್ವರ್ ರಘು ಎಂಬವರ ಮನೆ ಮುಂದೆ ಹಾದು ಹೋಗುವಾಗ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿತ್ತು. ಈ ಸಂದರ್ಭದಲ್ಲಿಯೇ ಜೆಡಿಎಸ್‌ನ ಶಂಕರೇ ಗೌಡ ಎಂಬಾತ ಮಚ್ಚಿನಿಂದ ಪರಮೇಶ್ವರ ಕೈ ಕತ್ತರಿಸಿರುವ ಘಟನೆ ನಡೆದಿದೆ.
ಪರಮೇಶ್ವರ ಕೈ ಕತ್ತರಿಸಿದ ಸುದ್ದಿ ತಿಳಿಯುತ್ತಿದ್ದಂತೆಯೇ ಕಾಂಗ್ರೆಸ್ ಕಾರ್ಯಕರ್ತರು ರೊಚ್ಚಿಗೆದ್ದು ಮೂರು ಮನೆ, ಐದು ಬೈಕ್‌ಗಳಿಗೆ ಬೆಂಕಿ ಹಚ್ಚಿದ್ದಾರೆ. ಘಟನೆಯಲ್ಲಿ ಮೂರು ಮಂದಿ ಗಾಯಗೊಂಡಿದ್ದಾರೆ. ಇದರಿಂದಾಗಿ ಬಿಕ್ಕಳೆಲೆ ಗ್ರಾಮ ಉದ್ವಿಗ್ನ ಸ್ಥಿತಿ ತಲೆದೋರಿದೆ. ಪರಿಸ್ಥಿತಿಯನ್ನು ಹತೋಟಿಗೆ ತರುವ ನಿಟ್ಟಿನಲ್ಲಿ ಸಿಆರ್‌ಪಿ ತಂಡ ಗ್ರಾಮಕ್ಕೆ ಆಗಮಿಸಿದೆ. ಅಲ್ಲದೆ, ಘಟನೆಗೆ ಸಂಬಂಧಿಸಿದಂತೆ 15 ಮಂದಿಯನ್ನು ವಶಕ್ಕೆ ತೆಗೆದುಕೊಂಡಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಮಾರಾಮಾರಿ ಪರಿಸ್ಥಿತಿಯಿಂದಾಗಿ ಬಿಕ್ಕಳೆಲೆ ಗ್ರಾಮದಲ್ಲಿನ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ. ಕಿಡಿಗೇಡಿಗಳ ದಾಂಧಲೆಗೆ ಮನೆಗಳು ಭಸ್ಮವಾಗಿದ್ದು, ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.