ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಆಂಧ್ರದಲ್ಲಿ ರಫ್ತು ನಿಷೇಧಕ್ಕೆ ಕಾಂಗ್ರೆಸ್ ಒತ್ತಾಯಿಸಲ್ಲವೇಕೆ?
(Andhra Pradesh | Mining | Karnataka | Congress | BJP | Mysore)
ಆಂಧ್ರದಲ್ಲಿ ರಫ್ತು ನಿಷೇಧಕ್ಕೆ ಕಾಂಗ್ರೆಸ್ ಒತ್ತಾಯಿಸಲ್ಲವೇಕೆ?
ಮೈಸೂರು, ಶನಿವಾರ, 14 ಆಗಸ್ಟ್ 2010( 15:15 IST )
ಅಕ್ರಮ ಗಣಿಗಾರಿಕೆ ವಿಷಯದಲ್ಲಿ ಬೆಂಗಳೂರಿನಿಂದ ಬಳ್ಳಾರಿಗೆ ಪಾದಯಾತ್ರೆ ಮಾಡಿದ ಕಾಂಗ್ರೆಸ್ ವಿರುದ್ಧ ಟೀಕಾ ಪ್ರಹಾರಗೈದ ಬಿಜೆಪಿ ಹಿರಿಯ ಮುಖಂಡ, ವಕ್ತಾರ ವೆಂಕಯ್ಯ ನಾಯ್ಡು, ತಾಕತ್ತಿದ್ದರೆ ಆಂಧ್ರಪ್ರದೇಶದಲ್ಲಿ ಅದಿರು ರಫ್ತಿಗೆ ನಿಷೇಧಕ್ಕೆ ಹೋರಾಟ ಮಾಡಿ ಎಂದು ಸವಾಲು ಹಾಕಿದ್ದಾರೆ.
ಶನಿವಾರ ಮೈಸೂರಿನಲ್ಲಿ ನಡೆದ ಬೃಹತ್ ಜನಜಾಗೃತಿ ಸಮಾವೇಶದಲ್ಲಿ ಮಾತನಾಡಿದ ಅವರು, ಅಕ್ರಮ ಗಣಿಗಾರಿಕೆ ನಡೆಯುತ್ತಿದೆ ಎಂಬ ಆರೋಪ ಬಂದಿರುವ ಹಿನ್ನೆಲೆಯಲ್ಲಿ ಕರ್ನಾಟಕದಿಂದ ಅದಿರು ರಫ್ತಿಗೇ ನಿಷೇಧವನ್ನು ಮುಖ್ಯಮಂತ್ರಿ ಯಡಿಯೂರಪ್ಪ ಹೇರಿ ದಿಟ್ಟ ನಿರ್ಧಾರ ಕೈಗೊಂಡಿದ್ದಾರೆ. ಹೀಗಾಗಿ ಕಾಂಗ್ರೆಸಿಗರಿಗೆ, ಕೇಂದ್ರ ಮಂತ್ರಿಗಳಿಗೆ ನನ್ನ ಒಂದೇ ಒಂದು ಸವಾಲು, ತಾಕತ್ತಿದ್ದವರು ಉತ್ತರ ನೀಡಲಿ, ಆಂಧ್ರ ಪ್ರದೇಶದಲ್ಲಿ ಅದಿರು ರಫ್ತು ನಿಷೇಧಿಸುತ್ತಿಲ್ಲವೇಕೆ ಎಂದು ಪ್ರಶ್ನಿಸಿದರು.
ಆಂಧ್ರದಲ್ಲಿ ಆಡಳಿತದಲ್ಲಿರುವುದು ಕಾಂಗ್ರೆಸ್ ಸರಕಾರ ಎಂಬುದು ಇಲ್ಲಿ ಗಮನಾರ್ಹ.
ಯಡಿಯೂರಪ್ಪ ಆಳ್ವಿಕೆಯನ್ನು ರಾಜ್ಯದ ಜನ ಮೆಚ್ಚಿಕೊಂಡಿದ್ದಾರೆ. ಹೀಗಾಗಿ ಲೋಕಸಭೆ ಮತ್ತು ಉಪ ಚುನಾವಣೆಗಳಲ್ಲಿ, ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಚುನಾವಣೆಗಳಲ್ಲಿ ಗೆಲ್ಲಿಸಿದ್ದಾರೆ. ಇದೀಗ ಸುಮ್ಮನೇ ರಾಜೀನಾಮೆ ಕೊಡಿ ರಾಜೀನಾಮೆ ಕೊಡಿ ಅಂತ ಕೂಗಾಡುತ್ತಿದ್ದಾರೆ. ಈಗಾಗಲೇ ಎರಡು ಬಾರಿ ನಿಮ್ಮನ್ನು ಜನ ಸೋಲಿಸಿದ್ದಾರೆ, 3ನೇ ಬಾರಿ ಸೋಲುಣ್ಣಲು ಇನ್ನು ಮೂರು ವರ್ಷ ಕಾಯಿರಿ. 2014ರ ಚುನಾವಣೆಗಳಲ್ಲಿಯೂ ಜನ ನಿಮಗೆ ತಕ್ಕ ಶಾಸ್ತಿ ಮಾಡುತ್ತಾರೆ ಎಂದು ಲೇವಡಿ ಮಾಡಿದರು.