' ಗೋ ಹತ್ಯೆ ನಿಷೇಧಿಸುತ್ತೇವೆ ಮತ್ತು ಗೋ ಹತ್ಯೆ ಮಾಡುವವರ ಕೈ ಕತ್ತರಿಸುತ್ತೇವೆ ಎಂಬ ಪ್ರಸ್ತಾಪವಿಟ್ಟು ನಾವು ವೋಟು ಕೇಳುತ್ತೇವೆ, ಕಾಂಗ್ರೆಸ್ಸಿಗರು ಗೋ ಹತ್ಯೆ ಮಾಡುತ್ತೇವೆ ನಮಗೆ ವೋಟ್ ಕೊಡಲಿ ಅಂತ ಕೇಳಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಕೆ.ಎಸ್.ಈಶ್ವರಪ್ಪ ಆಕ್ರೋಶದೊಂದಿಗೆ ಸವಾಲು ಹಾಕಿದರು.
ಶನಿವಾರ ಮೈಸೂರಿನಲ್ಲಿ ನಡೆದ ಬಿಜೆಪಿಯ ಬೃಹತ್ ಜನಜಾಗೃತಿ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ಮಾಜಿ ಪ್ರಧಾನಿ ದೇವೇಗೌಡರು, ಕಾಂಗ್ರೆಸ್ ಮುಖಂಡರು ಸೇರಿಕೊಂಡು ಗೋ ಹತ್ಯೆ ನಿಷೇಧಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಮುದಿ ಗೋವುಗಳನ್ನು ಮುಖ್ಯಮಂತ್ರಿಗಳ ಮನೆ ಮುಂದೆ ತಂದು ಬಿಡುವುದಾಗಿ ಹೇಳಿದ್ದಾರೆ. ಹಾಗಾದರೆ ದೇವೇಗೌಡರಿಗೆ ವಯಸ್ಸಾಗಿದೆಯಲ್ಲ ಅವರನ್ನು ಎಲ್ಲಿ ಬಿಡುವುದು ಎಂದು ಖಾರವಾಗಿ ಪ್ರಶ್ನಿಸಿದರು.
ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಗೆ ಬದ್ದ, ಗೋ ಮಾತೆಗೆ ರಾಜ್ಯದಲ್ಲಿ ಹತ್ಯೆ ಮಾಡಲು ಅವಕಾಶ ಕೊಡಲ್ಲ, ಚುನಾವಣಾ ಪ್ರಚಾರದಲ್ಲಿ ಹೇಳಿದ್ದೇವೆ. ನೀವೇನು ನಾಟಕ ಮಾಡಿಕೊಂಡು, ದೇವೇಗೌಡರ ಮಾತನ್ನು ನೆಪಮಾಡಿಕೊಂಡು ಗೋ ಹತ್ಯೆ ನಿಷೇಧದ ವಿರುದ್ಧ ಹೋದರೆ ಕಾಂಗ್ರೆಸ್, ಜೆಡಿಎಸ್ ಹೆಸರಿಲ್ಲದಂತೆ ಹೋಗುತ್ತೆ ನೋಡಿ ಎಂದು ಎಚ್ಚರಿಕೆ ನೀಡಿದರು.
ಆಹಾರ ಪದ್ಧತಿ ಹೆಸರಿನಲ್ಲಿ ಗೋಹತ್ಯೆ ನಿಷೇಧ ಕಾಯ್ದೆಗೆ ಕಾಂಗ್ರೆಸ್, ಜೆಡಿಎಸ್ ವಿರೋಧಿಸುತ್ತಿದೆ. ಇದನ್ನೇ ನೆಪವಾಗಿಟ್ಟುಕೊಂಡು ರಾಜ್ಯಪಾಲರು ಅವರ ಏಜೆಂಟ್‌ರಂತೆ ವರ್ತಿಸುತ್ತಿದ್ದಾರೆ. ಇನ್ನ್ಯಾರನ್ನೂ ಮೆಚ್ಚಿಸಲು ರಾಜ್ಯಪಾಲರು ಮಾಡುತ್ತಿರುವ ಕೆಲಸ ಖಂಡನೀಯ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.