ಮಠ ಮಾನ್ಯಗಳಿಗೆ ಸರಕಾರದ ಅನುದಾನ ಬಿಡುಗಡೆ ಪ್ರಕ್ರಿಯೆ ನಿರಂತರವಾಗಿ ಮುಂದುವರಿಯಲಿದೆ. ಅದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಸಾರಿಗೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಆರ್. ಅಶೋಕ್ ಸ್ಪಷ್ಟಪಡಿಸಿದ್ದಾರೆ.
ತಾಲೂಕಿನ ಬೇಬಿ ಗ್ರಾಮದ ಶ್ರೀ ದುರ್ದಂಡೇಶ್ವರ ಮಹಂತ ಶಿವಯೋಗಿಗಳ ಮಠದಲ್ಲಿ ನಡೆದ ಶತಾಯುಷಿ ಶ್ರೀ ಮರಿದೇವರು ಸ್ವಾಮೀಜಿ ಅವರ ದ್ವಿತೀಯ ವರ್ಷದ ಪುಣ್ಯ ಸ್ಮರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಬಾಂಬ್ ದಾಳಿ ನಡೆಸಿ ದೇಶದ ಜನರ ಪ್ರಾಣ ಬಲಿ ತೆಗೆದುಕೊಂಡ ಅಫ್ಜಲ್‌ಗುರುವಿನಂತಹ ದೇಶದ್ರೋಹಿಯ ಭದ್ರತೆಗೆ 45 ಕೋಟಿ ರೂ. ವೆಚ್ಚವಾಗಿದೆ. ರಾಜ್ಯದ ಸಂಸ್ಕೃತಿಯನ್ನು ಉಳಿಸಿ ಬೆಳೆಸುತ್ತಿರುವ ಮಠ ಮಾನ್ಯಗಳಿಗೆ ಹಣ ನೀಡಿದರೆ ತಪ್ಪೇನು ಎಂದು ಅವರು ಪ್ರಶ್ನಿಸಿದರು.
ಮಠಗಳಿಗೆ ಹಣ ಕೊಟ್ಟರೆ, ಭಕ್ತರಿಗೆ ಅನ್ನ ದಾಸೋಹ ಮತ್ತು ಮಕ್ಕಳಿಗೆ ಶಿಕ್ಷಣ ದಾಸೋಹ ನಡೆಸುತ್ತಾರೆ. ಈ ವಿಷಯವನ್ನು ಪ್ರತಿಪಕ್ಷಗಳು ಮನಗಾಣಬೇಕು. ಇನ್ನಾದರೂ ಟೀಕೆ ನಿಲ್ಲಿಸಬೇಕು ಎಂದು ಅವರು ಕಿವಿಮಾತು ಹೇಳಿದರು.
ದೇಶದ ಇತರೆಡೆಗಳಿಗೆ ಹೋಲಿಸಿದರೆ ಕರ್ನಾಟಕದ ಮಠಗಳು ಮತ್ತು ಸ್ವಾಮೀಜಿಗಳ ಬಗ್ಗೆ ಅಪಾರ ಗೌರವವಿದೆ. ಸರಕಾರದ ನೆರವಿಲ್ಲದೆಯೇ ಅನ್ನ, ಅಕ್ಷರ, ಆರೋಗ್ಯ ಸೇವೆ ನಡೆಸಿಕೊಂಡು ಬಂದಿರುವ ಮಠಗಳನ್ನು ಪ್ರೋತ್ಸಾಹಿಸುವುದು ತಪ್ಪೇನಲ್ಲ ಎಂದರು.