'ರಾಜಕಾರಣಿಗಳು, ಅಧಿಕಾರಿಗಳು ಭ್ರಷ್ಟರಾಗಿದ್ದಾರೆ, ಸರಿ...ನಿನಗೆ ಅಧಿಕಾರ ಕೊಟ್ಟರೆ ಏನು ಮಾಡುತ್ತೀಯ?ಎಲ್ಲರನ್ನೂ ಗುಂಡಿಟ್ಟು ಉಡಾಯಿಸಿ ಬಿಡುತ್ತೇನೆ' ಇದು ವಿದ್ಯಾರ್ಥಿಯೊಬ್ಬ ಕಾಂಗ್ರೆಸ್ ಯುವರಾಜ ರಾಹುಲ್ ಗಾಂಧಿ ಜತೆಗಿನ ಸಂವಾದದ ವೇಳೆ ಕೊಟ್ಟ ಉತ್ತರ. ಈ ಪ್ರಶ್ನೋತ್ತರದಿಂದ ರಾಹುಲ್ ಗಾಂಧಿ ತಬ್ಬಿಬ್ಬಾದ ಘಟನೆ ಕೂಡ ನಡೆಯಿತು!
ನಗರದ ನ್ಯಾಷನಲ್ ಕಾಲೇಜಿನಲ್ಲಿ ವಿದ್ಯಾರ್ಥಿಗಳೊಂದಿಗೆ ರಾಹುಲ್ ಸಂವಾದ ನಡೆಸಿದ ಸಂದರ್ಭದಲ್ಲಿ ವಿದ್ಯಾರ್ಥಿಯೊಬ್ಬನಿಂದ ತೂರಿಬಂದ ಅನಿರೀಕ್ಷಿತ ಉತ್ತರ. ನಂತರ ರಾಹುಲ್ ಗಾಂಧಿ, ನೀನು ನನ್ನೊಂದಿಗೆ ಬಾ. ಹತ್ತು ವರ್ಷಗಳಲ್ಲಿ ನಿನ್ನನ್ನು ಒಬ್ಬ ಸಮರ್ಥ ನಾಯಕನನ್ನಾಗಿ ಮಾಡುತ್ತೇನೆ ಎಂದು ಪ್ರತಿಕ್ರಿಯೆ ನೀಡಿದರು.
ಈ ಸಂದರ್ಭದಲ್ಲಿ ರಾಹುಲ್, ರಾಜಕೀಯದ ಬಗ್ಗೆ ಅಷ್ಟು ಅಸಡ್ಡೆ ಸಲ್ಲದು. ನೀವು ಕೂಡ ರಾಜಕೀಯಕ್ಕೆ ಬನ್ನಿ, ನಿಮಗೂ ರಾಜಕೀಯದ ತಿಳಿವಳಿಕೆ ನೀಡುತ್ತೇನೆ ಎಂದರು.
ನಂತರ ವಿದ್ಯಾರ್ಥಿನಿಯೊಬ್ಬಳಿಗೆ ರಾಹುಲ್ ಈ ದೇಶದಲ್ಲಿ ಹೆಚ್ಚು ಅನ್ಯಾಯವಾಗುತ್ತಿರುವುದು ಎಲ್ಲಿ ಎಂದು ಪ್ರಶ್ನಿಸಿದರು. ಅದಕ್ಕೆ ಆಕೆ, ಪರಿಶಿಷ್ಟ ಪಂಗಡ, ಜಾತಿ ಮತ್ತು ಹಿಂದುಳಿದ ವರ್ಗಗಳಿಗೆ ಮೀಸಲಾತಿ ನೀಡುತ್ತಿರುವುದು ಎಂದಳು. ಅದಕ್ಕೆ ರಾಹುಲ್, ವಿವರಣೆಯನ್ನೂ ಕೇಳಿದರು. ಮೀಸಲಾತಿಯಿಂದ ಇತರರಿಗೆ ಅನ್ಯಾಯ ಆಗುತ್ತಿದೆ. ಉದ್ಯೋಗದಲ್ಲಿ ಅವಕಾಶ ಸಿಗುತ್ತಿಲ್ಲ. ಕನಿಷ್ಠ ಅಂಕ ನೀಡಿದವರಿಗೆ ಉನ್ನತ ಸ್ಥಾನ ನೀಡುವುದು ಸರಿಯಲ್ಲ ಎಂದಳು.
ಇದಕ್ಕೆ ಪ್ರತಿಕ್ರಿಯಿಸಿದ ರಾಹುಲ್, ನೀವು ಎಂದಾದರು ಹಳ್ಳಿಗೆ ಹೋಗಿದ್ದೀರಾ?ಅಲ್ಲಿಯ ಜೀವನ ಕಂಡಿದ್ದೀರಾ ಎಂದು ಪ್ರಶ್ನಿಸಿದರು. ಆಗ ವಿದ್ಯಾರ್ಥಿನಿ ಇಲ್ಲ ಎಂದಾಗ, ಇದೇ ನಿಮಗೂ ನಮಗೂ ಇರುವ ವ್ಯತ್ಯಾಸ. ನೀವು ನನ್ನ ಜೊತೆ ಹಳ್ಳಿಗೆ ಬನ್ನಿ. ಅಲ್ಲಿ ಅವರು ಯಾವ ರೀತಿ ಬದುಕುತ್ತಿದ್ದಾರೆ ಎಂಬುದು ಕಾಣಬಹುದು. ಆಗ ನಿಮ್ಮ ಆರೋಪ ಪುನರುಚ್ಚರಿಸಿ ಎಂದಾಗ ವಿದ್ಯಾರ್ಥಿನಿ ಸುಮ್ಮನಾದಳು.
ಸುಮಾರು 500 ವಿದ್ಯಾರ್ಥಿಗಳ ಜೊತೆ ರಾಹುಲ್ ಸುಮಾರು ಒಂದು ಗಂಟೆ ಕಾಲ ಸಂವಾದ ನಡೆಸಿದರು. ಸಮಯದ ಅಭಾವದಿಂದ ಪ್ರಶ್ನೆ ಕೇಳಲು ಸಾಧ್ಯವಾಗಿಲ್ಲ ಎಂದು ಕಾರ್ಯಕ್ರಮದ ನಂತರ ಹಲವು ವಿದ್ಯಾರ್ಥಿಗಳು ಅಸಮಾಧಾನ ವ್ಯಕ್ತಪಡಿಸಿದರು. ಇನ್ನು ಕೆಲವರು ರಾಹುಲ್ ಅವರಿಂದ ಸಮರ್ಪಕ ಉತ್ತರ ಬರಲಿಲ್ಲ ಎಂಬ ಅತೃಪ್ತಿಯೂ ಇತ್ತು.