ಅಕ್ರಮ ಗಣಿ ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಡಿ ಎನ್ನುವವರಿಗೆ ಕಾನೂನಿನ ಜ್ಞಾನ ಇಲ್ಲ ಎಂದು ಕೇಂದ್ರ ಕಾರ್ಮಿಕ ಸಚಿವ ಮಲ್ಲಿಕಾರ್ಜುನ ಖರ್ಗೆ ಟೀಕಿಸಿದ್ದಾರೆ.
ಲೋಕಾಯುಕ್ತರ ಮೇಲೆ ಕಾಂಗ್ರೆಸ್‌ಗೆ ಸಂಪೂರ್ಣ ವಿಶ್ವಾಸವಿದೆ. ಅವರಿಗೆ ಒಪ್ಪಿಸಿದಲ್ಲಿ ಅವರ ಪರಮಾಧಿಕಾರ ಕೇವಲ ರಾಜ್ಯಕ್ಕೆ ಸೀಮಿತವಾಗಿರದೇ ಎಲ್ಲೆಲ್ಲಿ ಇದರ ಬೇರಿದೆಯೋ ಅಲ್ಲೆಲ್ಲ ತನಿಖೆ ಮಾಡಲು ಅನುಕೂಲವಾಗುತ್ತದೆ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.
ಗಣಿ ಅಕ್ರಮದಲ್ಲಿ ಕಾಂಗ್ರೆಸ್ ಪಕ್ಷದವರು ಹೆಚ್ಚಾಗಿದ್ದಾರೆ ಎಂದು ಹೇಳುವ ಮುಖ್ಯಮಂತ್ರಿ ಯಡಿಯೂರಪ್ಪನವರು ಸಿಬಿಐಗೆ ಒಪ್ಪಿಸಲು ಹಿಂಜರಿಯುವುದೇಕೆ ? ತಮ್ಮ ಪಕ್ಷದ ಸಚಿವರು ನಿಷ್ಠಾವಂತರಾಗಿದ್ದರೆ ಸಿಬಿಐಗೆ ಒಪ್ಪಿಸಲಿ ಎಂದು ಆಗ್ರಹಿಸಿದರು.
ರಾಜ್ಯದ ಬಡ ಕೂಲಿ ಕಾರ್ಮಿಕರಿಗಾಗಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ 370 ಕೋಟಿ ಬಿಡುಗಡೆ ಮಾಡಿದರೂ ಅದನ್ನು ಸಮರ್ಪಕ ಬಳಕೆ ಮಾಡಿಕೊಳ್ಳುವಲ್ಲಿ ರಾಜ್ಯ ಸರಕಾರ ವಿಫಲಗೊಂಡಿದೆ ಎಂದು ದೂರಿದ ಖರ್ಗೆ, ಯಾದಗಿರಿ ಮತ್ತು ಗುಲ್ಬರ್ಗ ಜಿಲ್ಲೆಯಲ್ಲಿ ಬಾಕಿ ಉಳಿದ ಹಣವನ್ನು ಪಾವತಿಸಲು ಕ್ರಮ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದರು.
ನೂತನ ಜಿಲ್ಲೆಯಲ್ಲಿ ಕಾರ್ಮಿಕರ ಸಹಭಾಗಿತ್ವ ಇದ್ದಲ್ಲಿ ಮಾತ್ರ ಅದರ ಅನುಗುಣವಾಗಿ ತಮ್ಮ ಇಲಾಖೆಯಿಂದ ನೆರವು ನೀಡಲು ಅವಕಾಶವಿದೆ. ಅದಕ್ಕೆ ಯಾವುದೇ ಯೋಜನೆಗಳನ್ನು ಜಾರಿಗೊಳಿಸಲು ತಾವು ಬದ್ಧ ಎಂದು ಹೇಳಿದರು.