ಗುಲ್ಬರ್ಗ ದಕ್ಷಿಣ ವಿಧಾನ ಸಭಾ ಕ್ಷೇತ್ರ ಚುನಾವಣೆಗೆ ಸ್ಪರ್ಧಿಸುವ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯನ್ನು ಎಲ್ಲ ಮುಖಂಡರ ಅಭಿಪ್ರಾಯ ಸಂಗ್ರಹಿಸಿ ಶೀಘ್ರದಲ್ಲಿಯೇ ಹೈಕಮಾಂಡ್ ಆಯ್ಕೆ ಮಾಡಲಿದೆ ಎಂದು ಮಾಜಿ ಮುಖ್ಯಮಂತ್ರಿ ಧರಂಸಿಂಗ್ ತಿಳಿಸಿದ್ದಾರೆ.
ನಗರಕ್ಕೆ ಆಗಮಿಸಿದ್ದ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ ಅವರನ್ನು ಬೀಳ್ಕೊಟ್ಟ ನಂತರ ಸುದ್ದಿಗಾರರ ಜತೆಗೆ ಮಾತನಾಡಿ, ತಾವು ಯಾರ ಹೆಸರನ್ನು ಸೂಚಿಸುವುದಿಲ್ಲ ಎಂದರು.
ಚುನಾವಣೆಗೆ ಯಾರನ್ನು ನಿಲ್ಲಿಸಬೇಕು ಎಂಬುದನ್ನು ಜಿಲ್ಲಾ ಕಾಂಗ್ರೆಸ್ ಸಮಿತಿ ಮತ್ತು ವರಿಷ್ಠರು ಸೇರಿಕೊಂಡು ಸಾಮೂಹಿಕವಾಗಿಯೇ ಅಂತಿಮಗೊಳಿಸಲಿದ್ದಾರೆ. ಯಾವುದೇ ಪಕ್ಷದ ಜತೆಗೆ ಮೈತ್ರಿ ಮಾಡಿಕೊಳ್ಳದೆ ಕಣಕ್ಕಿಳಿಯುತ್ತೇವೆ ಎಂದು ನುಡಿದರು.
ಚುನಾವಣಾ ಆಯೋಗ ಈ ಚುನಾವಣೆಯನ್ನು ಮುಕ್ತ ನ್ಯಾಯ ಸಮ್ಮತವಾಗಿ ನಡೆಸಿಕೊಂಡು ಹೋಗಲು ಎಲ್ಲ ಕ್ರಮ ಕೈಗೊಳ್ಳಬೇಕು ಮತ್ತು ಬಿಜೆಪಿ ಸರಕಾರದಿಂದ ಆಡಳಿತ ಯಂತ್ರ ದುರುಯೋಗ ಮಾಡಿಕೊಳ್ಳುವದಕ್ಕೆ ಕಡಿವಾಣ ಹಾಕಬೇಕು ಎಂದು ಅವರು ಆಗ್ರಹಿಸಿದರು.
ಚಿತ್ತಾಪುರ ಮರು ಚುನಾವಣೆಯಲ್ಲಿ ಬೋಗಸ್ ಮತದಾನ, ಸರಕಾರಿ ಯಂತ್ರ ದುರುಪಯೋಗ ಸಿಕ್ಕಾಪಟ್ಟೆ ಮಾಡಿಕೊಂಡು ಬಿಜೆಪಿ ಗೆಲುವು ಸಾಧಿಸಿತು. ಈ ಸಲವೂ ಹೀಗಾಗಬಾರದು. ಅಧಿಕಾರ, ಹಣ ಬಲ, ತೋಳಬಲ ಬಳಲು ಬಿಜೆಪಿ ಸನ್ನದ್ಧವಾಗಿದೆ ಎಂದು ಆರೋಪಿಸಿದರು.