ಕೋಲಾರ ಜಿಲ್ಲೆ ಗೌರಿಬಿದನೂರಿನಲ್ಲಿ ಶ್ರೀರಾಮ ಸೇನೆ ನೇತೃತ್ವದಲ್ಲಿ ಸ್ವಾತಂತ್ರ್ಯೋತ್ಸವ ದಿನಾಚರಣೆ ನಡೆಸದಂತೆ ಆದೇಶ ಹೊರಡಿಸಿರುವ ಜಿಲ್ಲಾಧಿಕಾರಿ ಕ್ರಮ ಖಂಡನೀಯ. ಇದಕ್ಕೆ ಸಾಥ್ ನೀಡಿರುವ ಉಸ್ತುವಾರಿ ಸಚಿವ ಮುಮ್ತಾಜ್ ಅಲಿಖಾನ್ ಪ್ರಜಾಪ್ರಭುತ್ವ ವ್ಯವಸ್ಥೆಗೆ ಧಕ್ಕೆ ತಂದಿದ್ದಾರೆ ಎಂದು ಶ್ರೀರಾಮ ಸೇನೆಯ ಸಂಚಾಲಕ ಅಧ್ಯಕ್ಷ ಪ್ರಮೋದ ಮುತಾಲಿಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿವಿಧ ಹಿಂದೂ ಸಂಘಟನೆಗಳ ನೇತೃತ್ವದಲ್ಲಿ ಶ್ರೀರಾಮಸೇನೆಯಿಂದ ಧ್ವಜಾರೋಹಣ ಮಾಡದಂತೆ ಕೋಲಾರ ಜಿಲ್ಲಾಧಿಕಾರಿ ಆದೇಶಿಸಿದ್ದು ಕಾನೂನು ಬಾಹಿರ ಕೃತ್ಯ ಎಂದು ಆರೋಪಿಸಿದರು.
ಪೀಪಲ್ಸ್ ವಾರ್ ಪಾರ್ಟಿಯಂತಹ ಸಂಘಟನೆಗೆ ಸುಪ್ರೀಂಕೋರ್ಟ್, ಧ್ವಜಾರೋಹಣಕ್ಕೆ ಅವಕಾಶ ನೀಡಿದೆ. ಆದರೆ ನಮಗೇಕೆ ಈ ರೀತಿಯ ಆದೇಶ ಎಂದು ಗುಡುಗಿದ ಅವರು, ಈ ಕೂಡಲೇ ಆದೇಶವನ್ನು ಹಿಂಪಡೆದು ಧ್ವಜಾರೋಹಣಕ್ಕೆ ಅವಕಾಶ ನೀಡಬೇಕು ಎಂದು ಆಗ್ರಹಿಸಿದರು.
ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಕೈದಿಗಳ ಬಿಡುಗಡೆಗೆ ರಾಜ್ಯಪಾಲರು ಅಡ್ಡಿಪಡಿಸುತ್ತಿರುವ ಕ್ರಮವನ್ನು ಟೀಕಿಸಿದ ಮುತಾಲಿಕ್, ಕೂಡಲೇ ರಾಜ್ಯಪಾಲರು ತಮ್ಮ ನಿಲುವು ಬದಲಿಸಿ ಹಿಂದಿನ ಸರಕಾರಗಳು ಮಾಡಿದಂತೆ ಸನ್ನಡತೆ ಕೈದಿಗಳನ್ನು ಬಿಡುಗಡೆ ಮಾಡಲು ಅನುಮತಿ ನೀಡಬೇಕು. ಈಗಾಗಲೇ ಸನ್ನಡತೆ ಹೊಂದಿರುವ 10ರಿಂದ 15 ವರ್ಷಗಳ ಕಾಲ ಶಿಕ್ಷೆ ಅನುಭವಿಸಿದವರು, ಅನಾರೋಗ್ಯ ಪೀಡಿತರ ಬಿಡುಗಡೆಗೆ ಅವಕಾಶವಿದ್ದರೂ ರಾಜ್ಯಪಾಲರ ನಿಲುವು ಖಂಡನಾರ್ಹ. ಶ್ರೀರಾಮ ಸೇನೆ ಸಂಘಟನೆಯಿಂದ ರಾಜ್ಯಪಾಲರು ಪಾಲ್ಗೊಳ್ಳುವ ಕಾರ್ಯಕ್ರಮಗಳಲ್ಲಿ ಕಪ್ಪುಬಾವುಟ ಪ್ರದರ್ಶಿಸಿ ಪ್ರತಿಭಟಿಸಲಾಗುವುದು ಎಂದು ತಿಳಿಸಿದರು.