ಅಕ್ರಮ ಗಣಿಗಾರಿಕೆ ತಡೆಯುವ ವಿಚಾರದಲ್ಲಿ ರಾಜ್ಯ ಸರಕಾರದ ವಿರುದ್ಧ ಬ್ರಹ್ಮಾಸ್ತ್ರ ಬಳಸುವುದೇ ಕೇಂದ್ರ ಸರಕಾರದ ಅಂತಿಮ ಗುರಿಯಲ್ಲವೆಂದು ಕೇಂದ್ರದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಎಂ.ವೀರಪ್ಪ ಮೊಯ್ಲಿ ಹೇಳಿದರು.
ಮಂತ್ರಾಲಯದಲ್ಲಿ ರಾಘವೇಂದ್ರ ಸ್ವಾಮಿ ಮಠ ಹಾಗೂ ಖಾಸಗಿ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡ ನಂತರ ಸುದ್ದಿಗಾರರ ಜತೆ ಮಾತನಾಡಿದರು. ರಾಷ್ಟ್ರದ ಅಮೂಲ್ಯ ಖನಿಜ ಸಂಪತ್ತು ಉಳಿಸಬೇಕು, ನಿಸರ್ಗ ರಕ್ಷಿಸಬೇಕು ಎನ್ನುವುದು ಕೇಂದ್ರ ಸರಕಾರದ ಬಹುಮುಖ್ಯ ಕಾಳಜಿಯಾಗಿದ್ದು, ಕಠಿಣ ಕಾನೂನು ರೂಪಿಸಬೇಕೆಂಬ ಚಿಂತನೆ ಶೀಘ್ರ ಕಾರ್ಯಗತಗೊಳ್ಳಲಿದೆ ಎಂದರು.
ಏಕರೂಪ ಕಾಯಿದೆ ದೇಶದ ಆಂತರಿಕ, ಬಾಹ್ಯ ವಿಚ್ಛಿದ್ರಕಾರಿ ಶಕ್ತಿಗಳನ್ನು ಮಟ್ಟ ಹಾಕಲು ರಾಜ್ಯ ಸರಕಾರದ ಸಹಕಾರ ಹಾಗೂ ಸಹಭಾಗಿತ್ವದಲ್ಲಿ ಏಕರೂಪ ಕಾಯಿದೆ ರೂಪಿಸುವ ಬಗ್ಗೆ ಯೋಚಿಸಲಾಗುತ್ತಿದೆ. ಆಂತರಿಕ ಭದ್ರತೆಗೆ ಬೆದರಿಕೆಯೊಡ್ಡಿರುವ ಸಮಾಜಘಾತುಕ ಶಕ್ತಿಗಳನ್ನು ಸದೆಬಡಿಯುವ ವಿಷಯದಲ್ಲಿ ಆಯಾ ರಾಜ್ಯ ಸರಕಾರಗಳಿಗೆ ಹೆಚ್ಚಿನ ಅಧಿಕಾರವಿದ್ದು, ಪರಿಣಾಮಕಾರಿ ಕ್ರಮ ಕೈಗೊಂಡು ದಿಟ್ಟ ಸಂದೇಶ ರವಾನಿಸುವುದು ತುರ್ತು ಅಗತ್ಯವಾಗಿದೆ.
ಕಾನೂನು ಮತ್ತು ನ್ಯಾಯಾಂಗ ವ್ಯವಸ್ಥೆಯಲ್ಲಿ ಸುಧಾರಣೆ ತರುವ ಉದ್ದೇಶದಿಂದ ಹೊಸ ನಿರ್ಧಾರ ಕೈಗೊಳ್ಳಲಾಗಿದ್ದು, ಮೊಕದ್ದಮೆಗಳ ವಿಲೇವಾರಿ ವಿಳಂಬ ತಪ್ಪಿಸಲು ನಾಲ್ಕು ವರ್ಷಗಳ ಗಡುವು ವಿಧಿಸಲಾಗಿದೆ. ನಿಗದಿತ ಅವಧಿಯೊಳಗೆ ದಾವೆಗಳ ಇತ್ಯರ್ಥಕ್ಕೆ ಪೂರಕ ಸವಲತ್ತು ಒದಗಿಸಲು ಕೇಂದ್ರ ಸಿದ್ಧವಾಗಿದೆ ಎಂದರು.