ಮಂಗಳೂರಿನಲ್ಲಿ ಪಬ್ ಮೇಲೆ ದಾಳಿ ನಡೆಸಿ ದೇಶಾದ್ಯಂತ ತೀವ್ರ ಟೀಕೆಗೆ ಒಳಗಾಗಿದ್ದ ಶ್ರೀರಾಮಸೇನೆ ಮತ್ತೆ ತನ್ನ ಚಾಳಿಯನ್ನು ಮುಂದುವರಿಸಿದ್ದು, ಇಲ್ಲಿನ ರಾಜ ಸಂಗಮ್ ಚಿತ್ರಮಂದಿರದ ಬಳಿ ಇರುವ ಬಾರ್ ಮೇಲೆ ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀರಾಮಸೇನೆಯ ನಾಲ್ಕು ಮಂದಿಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ರಾಜ ಸಂಗಮ್ ಚಿತ್ರಮಂದಿರದ ಸಮೀಪದ ಆದಿ ಮ್ಯಾನರ್ ಬಾರ್ ಮೇಲೆ ಶ್ರೀರಾಮಸೇನೆಯ ಕಾರ್ಯಕರ್ತರ ದಂಡು ಅಕ್ರಮ ಚಟುವಟಿಕೆ ಚಟುವಟಿಕೆ ನಡೆಸುತ್ತಿದ್ದಾರೆಂದು ಆರೋಪಿಸಿ ದಾಳಿ ನಡೆಸಿತ್ತು. ಈ ಸಂದರ್ಭದಲ್ಲಿ ಬಾರ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ನೌಕರರ ಮೇಲೆ ಹಲ್ಲೆ ನಡೆಸಿ, ಪೀಠೋಪಕರಣಗಳನ್ನು ಧ್ವಂಸಗೊಳಿಸಿದ್ದಾರೆ ಎಂದು ಬಾರ್ ಮಾಲೀಕರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಶ್ರೀರಾಮಸೇನೆ ಕಾರ್ಯಕರ್ತರ ದಾಳಿಯಿಂದಾಗಿ ಸುಮಾರು ಒಂದೂವರೆ ಲಕ್ಷ ರೂಪಾಯಿ ನಷ್ಟವಾಗಿದೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ. ಜೈಶ್ರೀರಾಮ್ ಎಂದು ಕೂಗುತ್ತಾ ಗ್ರಾಹಕರನ್ನು ಬೆದರಿಸಿ ದಾಳಿ ನಡೆಸಿರುವುದಾಗಿ ಬಾರ್ ಮಾಲೀಕರು ಆರೋಪಿಸಿದ್ದಾರೆ.
ನಾವು ಕಾನೂನು ಪ್ರಕಾರವಾಗಿಯೇ ಬಾರ್ ನಡೆಸುತ್ತಿದ್ದು, ಯಾವುದೇ ಅಕ್ರಮ ಚಟುವಟಿಕೆ ನಡೆಸುತ್ತಿಲ್ಲವಾಗಿತ್ತು. ಆದರೆ ಶ್ರೀರಾಮಸೇನೆಯ ಕಾರ್ಯಕರ್ತರು ನೀವು 12ಗಂಟೆ ರಾತ್ರಿಯವರೆಗೆ ಬಾರ್ ತೆರೆದಿರುತ್ತೀರಿ, ಅಕ್ರಮ ಚಟುವಟಿಕೆ ನಡೆಸುತ್ತಿದ್ದೀರಿ ಎಂದು ದೂರಿ ದಾಳಿ ನಡೆಸಿದ್ದಾರೆ ಎಂದು ದೂರಿದ್ದಾರೆ.
ಘಟನೆ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಲಷ್ಕರ್ ಠಾಣೆಯ ಪೊಲೀಸರು ಶ್ರೀರಾಮಸೇನೆಯ ಸೋಮಶೇಖರ್, ರಾಜು, ಸಂಜಯ್ ಹಾಗೂ ರಾಜ ಎಂಬಾತನನ್ನು ಬಂಧಿಸಿದ್ದಾರೆ. ಉಳಿದವರಿಗಾಗಿ ಶೋಧ ಕಾರ್ಯ ನಡೆಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.