ಸಚಿವರ ಕಾರನ್ನೇ ಓವರ್ ಟೇಕ್ ಮಾಡ್ತಿಯೇನೋ ಲೋಫರ್, ಲಾಕಪ್‌ಗೆ ಹಾಕಿ ರೌಡಿ ಶೀಟ್ ಓಪನ್ ಮಾಡಿಸ್ತೀನಿ. ನನ್ನ ಮಗನೇ ಜಾಡಿಸಿ ಒದಿತೇನೆ ನೋಡು...ಇದು ಕಾರ್ಮಿಕ ಸಚಿವ ಬಚ್ಚೇಗೌಡ ಅವರು ಭಾನುವಾರ ಉದ್ಯಮಿ ಭರತ್ ಕುಮಾರ್ ಎಂಬವರ ಮೇಲೆ ರೇಗಿ ಉದುರಿಸಿದ ಅಣಿಮುತ್ತು!
ಹಾಸನ ಜಿಲ್ಲೆಯ ಉಸ್ತುವಾರಿ ಮಂತ್ರಿಯಾದ ಬಚ್ಚೇಗೌಡರು ನಿನ್ನೆ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮ ಮುಗಿಸಿ ಬೆಂಗಳೂರಿಗೆ ವಾಪಸಾಗುತ್ತಿದ್ದ ವೇಳೆ ನೆಲಮಂಗಲದ ಸಮೀಪ ನಡೆದ ಘಟನೆ ಇದು. ಬಚ್ಚೇಗೌಡರು ಕಾರಿನಲ್ಲಿ ಆಗಮಿಸುತ್ತಿದ್ದಾಗ, ಉದ್ಯಮಿ ಭರತ್ ಕುಮಾರ್ ಅವರ ಟಾಟಾ ಸಫಾರಿ ಕಾರು ಸಚಿವರ ಕಾರನ್ನು ಓವರ್ ಟೇಕ್ ಮಾಡಿ ಹೋಗಿತ್ತು. ಇದರಿಂದ ಸಿಟ್ಟುಗೊಂಡ ಸಚಿವರ ಕಾರು ಚಾಲಕ ಭರತ್ ಕಾರನ್ನು ಅಡ್ಡಗಟ್ಟಿ ನಿಲ್ಲಿಸಿದ್ದರು.
ಏನೋ ಸಚಿವರ ಕಾರನ್ನೇ ಓವರ್ ಟೇಕ್ ಮಾಡುವಷ್ಟು ದುರಂಹಾಕಾರವೇ ಎಂದು ಭರತ್ ಅವರನ್ನು ಪ್ರಶ್ನಿಸಿದಾಗ, ಏನು ಸಚಿವರ ಕಾರನ್ನು ಓವರ್ ಟೇಕ್ ಮಾಡುವುದು ಅಪರಾಧವಾದರೇ ದೂರು ಕೊಡಿ ಎಂದು ಹೇಳಿದ್ದರು. ಇದನ್ನು ಕೇಳಿಸಿಕೊಂಡ ಬಚ್ಚೇಗೌಡರು ತಾಳ್ಮೆ ಕಳೆದುಕೊಂಡು. ಏಯ್ ನಾನು ಮಿನಿಷ್ಟರ್ ಬಚ್ಚೇಗೌಡ ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು. ಅಷ್ಟೇ ಅಲ್ಲ ತನ್ನ ಗನ್ ಮ್ಯಾನ್ ಅನ್ನು ಬಿಟ್ಟು ಹೊಡೆಸಿದ್ದಾರೆ. ನಂತರ ಕುಟುಂಬ ಸಮೇತ ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಗೆ ಕರೆತಂದು ಪ್ರಕರಣವನ್ನೂ ದಾಖಲಿಸಿದ್ದಾರೆ.
ಪೊಲೀಸರು ಭರತ್ ಕುಮಾರ್ ಅವರಿಂದ 300 ರೂಪಾಯಿ ದಂಡ ವಸೂಲಿ ಮಾಡಿದ್ದಾರೆ. ಇದೀಗ ಸಚಿವರ ಮತ್ತು ಗನ್ ಮ್ಯಾನ್ ಗೂಂಡಾಗಿರಿ ಬಗ್ಗೆ ಉದ್ಯಮಿ ಭರತ್ ಕುಮಾರ್ ಅಸಮಾಧಾನ ವ್ಯಕ್ತಪಡಿಸಿ, ದೂರು ನೀಡಲು ಮುಂದಾಗಿದ್ದಾರೆ.
ಕ್ಷಮೆಯಾಚಿಸುತ್ತೇನೆ-ಯಡಿಯೂರಪ್ಪ: ಉದ್ಯಮಿ ಭರತ್ ಕುಮಾರ್ ಮೇಲೆ ಕಾರ್ಮಿಕ ಸಚಿವರು ನಡೆದುಕೊಂಡ ರೀತಿ ತಪ್ಪು, ಈ ಬಗ್ಗೆ ಭರತ್ ಕುಟುಂಬದ ಕ್ಷಮೆಯಾಚಿಸುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಘಟನೆ ಕುರಿತಂತೆ ಪ್ರತಿಕ್ರಿಯೆ ನೀಡಿದ್ದಾರೆ. ಅಲ್ಲದೆ, ಘಟನೆ ಕುರಿತಂತೆ ಬಚ್ಚೇಗೌಡರಿಂದ ವಿವರ ಪಡೆಯುವುದಾಗಿ ತಿಳಿಸಿದ್ದಾರೆ.