ಗ್ರೌಂಡ್ ಕ್ಲೌಡ್ ಹಾರ್ವೆಸ್ಟಿಂಗ್-ತಂತ್ರಜ್ಞರ ಜತೆ ಚರ್ಚೆ: ಬೊಮ್ಮಾಯಿ
ಬೆಳಗಾವಿ, ಸೋಮವಾರ, 16 ಆಗಸ್ಟ್ 2010( 16:29 IST )
ಪಶ್ಚಿಮ ಕರಾವಳಿಯಲ್ಲಿ ಮಳೆ ಪ್ರಮಾಣ ಕಡಿಮೆಯಾಗಿ ಉಂಟಾಗಿರುವ ಸಮಸ್ಯೆ ಪರಿಹಾರಕ್ಕಾಗಿ `ಗ್ರೌಂಡ್ ಕ್ಲೌಡ್ ಹಾರ್ವೆಸ್ಟಿಂಗ್' ವಿಷಯ ಕುರಿತು ಚರ್ಚಿಸಲು ಬೆಂಗಳೂರಿನಲ್ಲಿ ತಂತ್ರಜ್ಞರ ಸಭೆ ನಡೆಯಲಿದೆ ಎಂದು ಜಲ ಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಪಶ್ಚಿಮ ಕರಾವಳಿಯಲ್ಲಿ ಶೇ. 35ರಷ್ಟು ಮಳೆ ಕೊರತೆಯಾಗಿದೆ. ನಿರೀಕ್ಷಿಸಿದ ಪ್ರಮಾಣದಲ್ಲಿ ಮಳೆ ಬೀಳದೇ ಜಲಾಶಯಗಳಲ್ಲಿ ನೀರು ಸಂಗ್ರಹ ಆಗಿಲ್ಲ. ಇದು ಚಿಂತೆಗೆ ಕಾರಣವಾಗಿದೆ. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ತಜ್ಞರ ಜತೆ ಚರ್ಚೆ ಮಾಡಲಾಗಿದೆ. ಆ ನಿಟ್ಟಿನಲ್ಲಿ ತಂತ್ರಜ್ಞರಸಭೆಯಲ್ಲಿ ಸಲಹೆ-ಸೂಚನೆಗಳನ್ನು ಪಡೆಯಲು ನಿರ್ಧರಿಸಲಾಗಿದೆ ಎಂದರು.
ಗ್ರೌಂಡ್ ಕ್ಲೌಡ್ ಹಾರ್ವೆಸ್ಟಿಂಗ್ ಈಗಾಗಲೇ ಕೆನಡಾ, ದಕ್ಷಿಣ ಆಫ್ರಿಕಾ, ಚೀನಾದಲ್ಲಿ ಪ್ರಯೋಗವಾಗಿದೆ. ಇದನ್ನು ಜಲಾನಯನ ಪ್ರದೇಶ ವ್ಯಾಪ್ತಿಯಲ್ಲಿ ಮಾಡಿ ಜಲಾಶಯಗಳಿಗೆ ನೀರು ಪಡೆಯಲಾಗುತ್ತದೆ. ಯೋಜನೆಯ ಕಾರ್ಯವ್ಯಾಪ್ತಿ ಅನುಸರಿಸಿ ವೆಚ್ಚ ನಿರ್ಧಾರವಾಗುತ್ತದೆ. ರಾಜ್ಯದಲ್ಲಿ ಲಿಂಗನಮಕ್ಕಿ, ಕೊಡಗು, ಸಕಲೇಶಪುರ ಒಳಗೊಂಡಂತೆ ಇತರ ಕಡೆ ಇದರ ಪ್ರಯೋಗ ನಡೆಯಲಿದೆ. ನ್ಯಾಶನಲ್ ಏರೋನ್ಯಾಟಿಕಲ್ ಲಿಮಿಟೆಡ್ (ಎನ್ಎಎಲ್) ಇದರ ನೇತೃತ್ವ ವಹಿಸಲಿದೆ ಎಂದರು.