ಪ್ರವಾಸೋದ್ಯಮ ಅಭಿವೃದ್ಧಿಗೆ ಇನ್ನಷ್ಟು ಯೋಜನೆ: ರೇವೂ ನಾಯಕ್
ಬೀದರ್, ಸೋಮವಾರ, 16 ಆಗಸ್ಟ್ 2010( 16:36 IST )
ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಇನ್ನಷ್ಟು ಹೊಸ ಯೋಜನೆಗಳನ್ನು ಹಾಕಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಪಶು ಸಂಗೋಪನೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ರೇವೂ ನಾಯಕ ಬೆಳಮಗಿ ಹೇಳಿದ್ದಾರೆ.
ಬೀದರ್‌ನಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ವಿಪುಲ ಅವಕಾಶಗಳಿವೆ. ಈಗಾಗಲೇ ಹಲವು ಕೆಲಸ ಕೈಗೆತ್ತಿಕೊಂಡಿದ್ದು, ಇದಕ್ಕೆ ಪೂರಕವಾಗಿ ಇನ್ನಷ್ಟು ಯೋಜನೆ ರೂಪಿಸಲಾಗುವುದು. ನಗರದ ಅಭಿವೃದ್ದಿಗೆ ಹಿಂದೆಂದೂ ನೀಡದಷ್ಟು ಅನುದಾನ ಕಲ್ಪಿಸಿದ್ದು, ನಗರದ ಸ್ವರೂಪವೇ ಬದಲಾಗಿದೆ ಎಂದರು.
ಮೂಲಸೌಕರ್ಯ ಅಭಿವೃದ್ದಿಗೆ 75 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ಕೈಗೊಳ್ಳಲಾಗಿದೆ. ಮುಖ್ಯಮಂತ್ರಿಗಳ ಸಣ್ಣ ಮತ್ತು ಮಧ್ಯಮ ಪಟ್ಟಣಗಳ ಅಭಿವೃದ್ಧಿ ಕಾರ್ಯಕ್ರಮದಡಿ ಜಿಲ್ಲೆಗೆ 52 ಕೋಟಿ ರೂ. ಒದಗಿಸಲಾಗಿದೆ. ಇದರಿಂದ ತಾಲೂಕು ಕೇಂದ್ರಗಳಲ್ಲಿ ಮೂಲಸೌಕರ್ಯ ಕಾಮಗಾರಿಗಳು ಆರಂಭವಾಗಿವೆ. ಜಿಲ್ಲೆಯ ಸಮಗ್ರ ವಿಕಾಸಕ್ಕೆ ಬದ್ಧವಾಗಿದ್ದು, ಅಗತ್ಯ ಅನುದಾನ ಕಲ್ಪಿಸಲು ನಿರಂತರ ಪ್ರಯತ್ನಿಸುವುದಾಗಿ ಹೇಳಿದರು.
ಜಿಲ್ಲೆಯಲ್ಲಿ 1100 ಕೋಟಿ ರೂ. ವೆಚ್ಚದಲ್ಲಿ ಬಯೋ ಟೆಕ್ನಾಲಜಿ ಪಾರ್ಕ್ ಸ್ಥಾಪನೆಗೆ ಬೆಂಗಳೂರಿನಲ್ಲಿ ನಡೆದ ವಿಶ್ವ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಒಡಂಬಡಿಕೆ ಆಗಿದೆ. ಈ ಘಟಕದಿಂದ ಒಂದು ಸಾವಿರ ಮಂದಿಗೆ ನೇರ ಉದ್ಯೋಗ ದೊರೆಯಲಿದೆ. ಬೀದರ್-ಗುಲ್ಬರ್ಗ ರೈಲು ಮಾರ್ಗದ ನಿರ್ಮಾಣ ಕಾಮಗಾರಿ, ಭೂಸ್ವಾಧೀನಕ್ಕಾಗಿ 65 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಸಾವಯವ ಕೃಷಿಗೆ ಉತ್ತೇಜನ ನೀಡಲು ಕಾರ್ಯಕ್ರಮ ಹಾಕಿಕೊಂಡಿದ್ದು, ಮುಖ್ಯಮಂತ್ರಿ ಯಡಿಯೂರಪ್ಪ ಆಗಸ್ಟ್ 28ಕ್ಕೆ ಔರಾದ್ ತಾಲೂಕಿನ ರೈತನ ಮನೆಯವಲ್ಲಿ ವಾಸ್ತವ್ಯ ಹೂಡಲಿದ್ದಾರೆ ಎಂದು ತಿಳಿಸಿದರು.