ರಾಜ್ಯದ ನಾನಾ ಕಡೆ ಕೊಳಚೆ ಪ್ರದೇಶದಲ್ಲಿ 100 ಗ್ರಂಥಾಲಯ ತೆರೆಯಲಾಗಿದೆ ಎಂದು ಗ್ರಂಥಾಲಯ ಸಚಿವ ಕೆ.ಶಿವನಗೌಡ ನಾಯಕ ತಿಳಿಸಿದ್ದಾರೆ.
ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಧ್ವಜಾರೋಹಣ ನೆರವೇರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಕೊಳಚೆ ಪ್ರದೇಶದಲ್ಲಿ ವಾಸಿಸುವ ಜನರಿಗೂ ಗ್ರಂಥಾಲಯ ಸೌಲಭ್ಯ ಒದಗಿಸುವ ಉದ್ದೇಶದಿಂದ ತೆರೆಯಲಾಗಿದೆ. ಸುಮಾರು 20 ಕೋಟಿ ರೂ. ವೆಚ್ಚದಲ್ಲಿ ರಾಜ್ಯದಲ್ಲಿರುವ ಗ್ರಂಥಾಲಯ ದುರಸ್ತಿಗೆ ಒತ್ತು ನೀಡಲಾಗಿದ್ದು, ಅವಶ್ಯವಿದ್ದಲ್ಲಿ ಹೊಸ ಕಟ್ಟಡ ನಿರ್ಮಿಸಲಾಗುತ್ತಿದೆ. 2009-10 ಹಾಗೂ 2010-11 ನೇ ಸಾಲಿನಲ್ಲಿ ತಲಾ 5 ಕೋಟಿ ರೂ.ಗಳನ್ನು ಕನ್ನಡ ಪುಸ್ತಕ ಖರೀದಿಗೆ ಮೀಸಲಿರಿಸಿದೆ ಎಂದರು.
ಗ್ರಾಮೀಣ ಅಭ್ಯರ್ಥಿಗಳಿಗೆ ಐಎಎಸ್ ಮತ್ತು ಕೆಎಎಸ್ ಪರೀಕ್ಷೆ ಎದುರಿಸಲು ಅನುಕೂಲವಾಗಲೆಂದು ಪ್ರತಿ ತಾಲೂಕು ಮಟ್ಟದಲ್ಲಿ ಸ್ಪರ್ಧಾತ್ಮಕ ಪುಸ್ತಕ ವಿಭಾಗ ತೆರೆದಿದೆ. ರಾಜ್ಯದಲ್ಲಿರುವ ಮಕ್ಕಳ 30 ಸಮುದಾಯ ಕೇಂದ್ರಗಳ ಅಭಿವೃದ್ದಿಗೂ ಕ್ರಮಕೈಗೊಳ್ಳಲಾಗಿದೆ ಎಂದು ಈ ಸಂದರ್ಭದಲ್ಲಿ ಹೇಳಿದರು.