ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ವಿದ್ಯುತ್ ಸಮಸ್ಯೆಗೆ ಕಡಿವಾಣ-ಸಾವಿರ ಮೆಗಾ ವ್ಯಾಟ್ ಖರೀದಿ: ಸಿಎಂ (500 MW of power | Yeddyurappa | Bangalore | Karnataka Electricity)
ವಿದ್ಯುತ್ ಸಮಸ್ಯೆಗೆ ಕಡಿವಾಣ-ಸಾವಿರ ಮೆಗಾ ವ್ಯಾಟ್ ಖರೀದಿ: ಸಿಎಂ
ಬೆಂಗಳೂರು, ಸೋಮವಾರ, 16 ಆಗಸ್ಟ್ 2010( 17:38 IST )
ರಾಜ್ಯದಲ್ಲಿ ತಲೆದೋರಿರುವ ವಿದ್ಯುತ್ ಸಮಸ್ಯೆ ನಿವಾರಿಸಲು ಮುಂದಾಗಿರುವ ರಾಜ್ಯ ಸರಕಾರ ಈಗಾಗಲೇ 500 ಮೆಗಾ ವ್ಯಾಟ್ ವಿದ್ಯುತ್ ಖರೀದಿ ಪ್ರಾರಂಭಿಸಿದ್ದು, ಸೆಪ್ಟೆಂಬರ್‌ನಿಂದ ಇನ್ನೂ ಒಂದು ಸಾವಿರ ಮೆಗಾ ವ್ಯಾಟ್ ವಿದ್ಯುತ್ ಖರೀದಿಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.
ಎಷ್ಟೇ ಹಣ ಖರ್ಚಾದರೂ ಚಿಂತೆಯಿಲ್ಲ, ರೈತರಿಗೆ ಹಾಗೂ ನಾಡಿನ ಜನರಿಗೆ ತೊಂದರೆಯಾಗದಂತೆ ವಿದ್ಯುತ್ ಪೂರೈಸಲು ಕ್ರಮ ಕೈಗೊಳ್ಳಲಾಗುವುದು ಎಂದು ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡುತ್ತ ಹೇಳಿದರು.
ರಾಜ್ಯದಲ್ಲಿನ ವಿದ್ಯುತ್ ಪರಿಸ್ಥಿತಿ ಸುಧಾರಿಸುವವರೆಗೂ ಗುಣಮಟ್ಟದ ವಿದ್ಯುತ್ ಪೂರೈಸಲು ಸರಕಾರ ಬದ್ದವಾಗಿದೆ ಎಂದರು. ರಾಜ್ಯದಲ್ಲಿನ ವಿದ್ಯುತ್ ಸ್ಥಿತಿ ಗತಿ ಬಗ್ಗೆ ಎರಡು ದಿನಗಳಿಗೊಮ್ಮೆ ಅಧಿಕಾರಿಗಳ ಸಭೆ ನಡೆಸಿ ಪರಿಸ್ಥಿತಿ ಸುಧಾರಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ವಿದ್ಯುತ್ ಖರೀದಿಸಲು ಈಗಾಗಲೇ ಬಿಡ್ ಸಲ್ಲಿಸಲಾಗಿದೆ. ಸೋಮವಾರ ಸಂಜೆ ಮತ್ತೆ ಒಂದು ಸಾವಿರ ಮೆಗಾವ್ಯಾಟ್ ವಿದ್ಯುತ್ ಖರೀದಿಗೆ ಬಿಡ್ ಸಲ್ಲಿಸಲಾಗುವುದು ಎಂದು ಈ ಸಂದರ್ಭದಲ್ಲಿ ಹೇಳಿದರು.
ಬೆಂಗಳೂರು ನಗರದಲ್ಲಿಯೇ ದಿನಕ್ಕೆ ನಾಲ್ಕೈದು ಬಾರಿ ಪವರ್ ಕಟ್ ಆಗುತ್ತಿರುವುದರಿಂದ ಜನಸಾಮಾನ್ಯರಿಂದ ಹಿಡಿದು ಕೈಗಾರಿಕೋದ್ಯಮಿಗಳಿಗೆ ಸಾಕಷ್ಟು ಹೊಡೆತ ಬಿದ್ದಿತ್ತು. ಆ ನಿಟ್ಟಿನಲ್ಲಿ ಮುಖ್ಯಮಂತ್ರಿಗಳ ಈ ನಿರ್ಧಾರದಿಂದಾಗಿ ಇದೀಗ ಸ್ವಲ್ಪ ನಿರಾಳತೆ ಬಂದಂತಾಗಿದೆ ಎಂದು ಆರ್.ಟಿ.ನಗರದ ನಿವಾಸಿಯೊಬ್ಬರು ಅಭಿಪ್ರಾಯವ್ಯಕ್ತಪಡಿಸಿದ್ದಾರೆ.