ಸರಕಾರಿ ವೈದ್ಯ ಕಾಲೇಜಿನಲ್ಲಿನ ಅಕ್ರಮ ನೇಮಕಾತಿಯನ್ನು ರದ್ದುಗೊಳಿಸಿ, ಲೋಕಾಯುಕ್ತ ತನಿಖೆ ನಡೆಸಬೇಕು ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ರೇವಣ್ಣ ಆಗ್ರಹಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಕ್ರಮ ನೇಮಕದ ಬಗ್ಗೆ ತಾವಾಗಿಯೇ ಹೊಣೆ ಹೊತ್ತು ವೈದ್ಯ ಶಿಕ್ಷಣ ಸಚಿವ ರಾಮಚಂದ್ರಗೌಡ ರಾಜೀನಾಮೆ ನೀಡಿ ಲೋಕಾಯಕ್ತ ತನಿಖೆಗೆ ಸಹಕರಿಸಲಿ ಎಂದರು.
ಸಂದರ್ಶನ ನಡೆದ ಬಳಿಕ ಆಯ್ಕೆಯಾದವರ ಪಟ್ಟಿ ಪ್ರಕಟಿಸಬೇಕಿತ್ತು. ಅದನ್ನು ಬಿಟ್ಟು, ಆರು ತಿಂಗಳು ಪಟ್ಟಿಯನ್ನು ತಮ್ಮ ಬಳಿಯೇ ಇಟ್ಟುಕೊಂಡು ಲೋಪವೆಸಗಿರುವ ವೈದ್ಯ ಕಾಲೇಜಿನ ನಿರ್ದೇಶಕರನ್ನು ಅಮಾನತುಗೊಳಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಮೈಸೂರು ವೈದ್ಯ ಕಾಲೇಜಿನ ನೇಮಕದಲ್ಲೂ ನಿಯಮಾವಳಿ ಉಲ್ಲಂಘಿಸಲಾಗಿದೆ. ಹಾಸನ ಕಾಲೇಜು ನೇಮಕಕ್ಕೂ ಹಣಕಾಸು ಇಲಾಖೆ ಒಪ್ಪಿಗೆ ಪಡೆದಿಲ್ಲ. ಕಾನೂನು ಗಾಳಿಗೆ ತೂರಿ ನೇಮಕ ಮಾಡಿರುವುದರಿಂದ ಎರಡೂ ಕಾಲೇಜಿನ ನೇಮಕಗಳನ್ನು ರದ್ದುಗೊಳಿಸಬೇಕು ಎಂದರು.
ವೈದ್ಯ ಕಾಲೇಜಿನ ನೇಮಕದಲ್ಲಿ ಎಷ್ಟೆಷ್ಟು ಭ್ರಷ್ಟಾಚಾರವಾಗಿದೆ ಎನ್ನುವುದು ಜಗಜ್ಜಾಹೀರಾಗಿದೆ. ಅಲ್ಲಿರುವ ಅಧಿಕಾರಿಗಳೇ ಯಾರೆಲ್ಲ ಎಷ್ಟು ಹಣ ಪಡೆದಿದ್ದಾರೆ ಎಂದು ಹೇಳುತ್ತಿದ್ದಾರೆ. ಸಚಿವರ ಆಪ್ತ ಸಹಾಯಕನ ಮೂಲಕ ಹಣ ವಸೂಲಿ ಮಾಡಲಾಗಿದೆ. ನೇಮಕದಲ್ಲಿ ಭ್ರಷ್ಟಾಚಾರ ನಡೆದಿರುವುದನ್ನು ಸಚಿವರೇ ಈ ಹಿಂದೆ ಒಪ್ಪಿಕೊಂಡಿದ್ದಾರೆ. ಆದ್ದರಿಂದ ಲೋಕಾಯುಕ್ತ ತನಿಖೆ ಅವಶ್ಯ ಎಂದು ಹೇಳಿದರು.