ಹಿಂದೂಗಳ ಆರಾಧ್ಯ ದೇವರಾದ ಶ್ರೀರಾಮ ಜನಿಸಿದ ಸ್ಥಳದಲ್ಲಿ ರಾಮಮಂದಿರ ನಿರ್ಮಿಸಲು ಆಗದಿರುವುದು ರಾಷ್ಟ್ರಕ್ಕೆ ಅಪಮಾನ ಎಂದು ಪೇಜಾವರ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ನಗರದಲ್ಲಿ ಹನುಮ ಶಕ್ತಿ ಜಾಗರಣ ಅಭಿಯಾನ ಉದ್ಘಾಟಿಸಿ ಮಾತನಾಡಿದ ಅವರು, ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗ ಬೇಕಾದರೆ ಇರುವುದೊಂದೇ ಮಾರ್ಗ. ಕೇಂದ್ರ ಸರಕಾರ ಸಂಸತ್‌ನಲ್ಲಿ ವಿಧೇಯಕ ತರಬೇಕು. ಈ ದಿಸೆಯಲ್ಲಿ ಸರಕಾರದ ಮೇಲೆ ಪಕ್ಷಾತೀತವಾದ ಒತ್ತಡವನ್ನು ಹೇರುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.
ಶ್ರೀರಾಮ ಇಡೀ ರಾಷ್ಟ್ರಕ್ಕೆ ಪ್ರೇರಕ ಶಕ್ತಿ. ಆದರೆ ಆತ ಜನಿಸಿದ ಸ್ಥಳದಲ್ಲಿ ಮಂದಿರ ಆಗದಿರುವುದು ನಾಚಿಕೆಗೇಡು. ಈ ಮಾತು ಯಾವ ಧರ್ಮದ ವಿರುದ್ಧ, ಸಮಾಜದ ವಿರುದ್ಧ ಅಲ್ಲ. ಇತಿಹಾಸ, ಪುರಾಣದ ದೃಷ್ಟಿಯಲ್ಲಿ ಅವಲೋಕಿಸಿದರೆ ಅಯೋಧ್ಯೆ ರಾಮ ಜನ್ಮಭೂಮಿ ಎನ್ನುವುದು ಸ್ಪಷ್ಟ. ಈ ವಿಷಯದಲ್ಲಿ ವಿವಾದಕ್ಕೆ ಆಸ್ಪದವೇ ಇಲ್ಲ ಎಂದು ಸ್ಪಷ್ಟಪಡಿಸಿದರು.
ರಾಮಮಂದಿರ ನಿರ್ಮಾಣ ಪಕ್ಷಾತೀತವಾದ ವಿಚಾರ. ರಾಜಕೀಯ ಕಾರಣಗಳನ್ನು ಮುಂದಿಟ್ಟುಕೊಂಡು ಮಹತ್ವದ ಈ ವಿಚಾರವನ್ನು ಮುಂದೂಡುವುದು ಸರಿಯಲ್ಲ. ನ್ಯಾಯಾಲಯದ ತೀರ್ಮಾನಕ್ಕೆ ವರ್ಷಾನುಗಟ್ಟಲೇ ಕಾಯಬೇಕು. ಆದ್ದರಿಂದ ಶಾಸನ ರೂಪಿಸುವುದೊಂದೇ ಪರಿಹಾರ. ಇದಕ್ಕೆ ಪಕ್ಷಾತೀತವಾದ ಒತ್ತಡ ಅವಶ್ಯ ಎಂದು ಪ್ರತಿಪಾದಿಸಿದರು.
ಜನರು ಏಕಾಭಿಪ್ರಾಯಕ್ಕೆ ಬಂದರೆ ಯಾವುದೇ ಸರಕಾರ ಮಣಿಯಲೇ ಬೇಕು. ಇವತ್ತು ಪ್ರಜೆಗಳೇ ಪ್ರಭುಗಳು. ಯಥಾ ಪ್ರಜಾ, ತಥಾ ರಾಜ. ಜನರು ಮನಸ್ಸು ಮಾಡಿದರೆ ಎಲ್ಲವೂ ಸಾಧ್ಯ. ಈ ದಿಕ್ಕಿನಲ್ಲಿ ಜಾಗೃತಿ, ಜಾಗರಣೆ, ಸಂಘಟನೆ, ಅಭಿಯಾನ ಆಗಬೇಕು. ಭಕ್ತಿ, ಶಕ್ತಿಯ ಸಮನ್ವಯವಾಗಿರುವ ಹನುಮನಂತೆ ಯುವಕರು ರಾಮನ ಕಾಯಲು ಸಜ್ಜಾಗಬೇಕು ಎಂದರು.