ಗೋ ರಕ್ಷಣೆ ಹೆಸರಿನಲ್ಲಿ ಹಿಂದುತ್ವ ಅಜೆಂಡಾ: ಜನಾರ್ದನ ಪೂಜಾರಿ
ಮಂಗಳೂರು, ಮಂಗಳವಾರ, 17 ಆಗಸ್ಟ್ 2010( 16:43 IST )
ರಾಜ್ಯ ವಿಧಾನಮಂಡಲದಲ್ಲಿ ಅಂಗೀಕಾರಗೊಂಡ ಗೋಹತ್ಯೆ ನಿಷೇಧ ವಿಧೇಯಕ್ಕೆ ರಾಷ್ಟ್ರಪತಿ ಅಂಗೀಕಾರ ನೀಡದಂತೆ, ಅವರಿಗೆ ಮನವರಿಕೆ ಮಾಡಬೇಕೆಂದು ಕೇಂದ್ರದ ಮಾಜಿ ಸಚಿವ ಬಿ.ಜನಾರ್ದನ ಪೂಜಾರಿ ಪ್ರಧಾನ ಮಂತ್ರಿಯವರನ್ನು ಒತ್ತಾಯಿಸಿದ್ದಾರೆ.
ಭ್ರಷ್ಟಾಚಾರ ಹಾಗೂ ಕಾನೂನು ಅವ್ಯವಸ್ಥೆಯ ಆಗರವಾಗಿರುವ ಬಿಜೆಪಿ ಸರಕಾರ ಆಡಳಿತದ ಎಲ್ಲ ರಂಗದಲ್ಲೂ ವಿಫಲವಾಗಿದೆ. ಇದೀಗ ಜನತೆಯ ಗಮನ ಬೇರೆಡೆ ಸೆಳೆಯುವ ಸಲುವಾಗಿ ವಿವಾದಾಸ್ಪದ ಗೋಹತ್ಯೆ ವಿಧೇಯಕ ಮಂಡಿಸಿದೆ. ಗೋ ರಕ್ಷಣೆ ಹೆಸರಿನಲ್ಲಿ ಹಿಂದುತ್ವ ಅಜೆಂಡಾವನ್ನು ಜಾರಿಗೊಳಿಸುವ ಬಿಜೆಪಿಯ ರಾಜಕೀಯ ತಂತ್ರ ಇದರಲ್ಲಿ ಅಡಕವಾಗಿದೆ ಎಂದು ಅವರು ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರಿಗೆ ಸಲ್ಲಿಸಿರುವ ಮನವಿಯಲ್ಲಿ ತಿಳಿಸಿದ್ದಾರೆ.
ಸಂಪೂರ್ಣವಾಗಿ ಗೋಹತ್ಯೆ ನಿಷೇಧಿಸುವ ಬಿಜೆಪಿಯ ಕ್ರಮ ಸಂವಿಧಾನ ವಿರೋಧಿಯಾಗಿದೆ. ಹಾಗೂ ನ್ಯಾಯಾಲಯ ಈ ಹಿಂದೆ ನೀಡಿರುವ ತೀರ್ಪಿಗೆ ವಿರುದ್ಧವಾಗಿದೆ. ಈ ಕಾಯಿದೆಯಲ್ಲಿ ಗೋ ಸಾಗಾಟ, ಮಾಂಸ ಮಾರಾಟ ಎಲ್ಲವನ್ನೂ ಅಪರಾಧ ಎಂದು ಪರಿಗಣಿಸಲಾಗುತ್ತದೆ. ಯಾವುದೇ ಜಾಮೀನು ಇಲ್ಲದೆ ಏಳು ವರ್ಷ ಬಂಧನದಲ್ಲಿಡುವ ಶಿಕ್ಷೆ ಅನುಭವಿಸಬಹುದಾಗಿದೆ. ಇದು ವೈಯುಕ್ತಿಕ ದ್ವೇಷ ಸಾಧನೆಗೆ ಕಾರಣವಾಗಲಿದ್ದು, ಮುಗ್ದ ಜನಗಳು ಬಲಿಪಶುವಾಗುವ ಸಾಧ್ಯತೆ ಇದೆ ಎಂದರು.
ಸಂಪೂರ್ಣ ಗೋ ಹತ್ಯೆ ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್ ಈ ಹಿಂದೆ ನೀಡಿದ ಕೆಲವು ತೀರ್ಪುಗಳಲ್ಲಿ ತಿಳಿಸಿದೆ. ಈ ವಿಧೇಯಕ ಪ್ರಜೆಗಳ ಸಂವಿಧಾನಬದ್ಧ ಹಕ್ಕನ್ನು ಕಸಿಯುವ ಪ್ರಯತ್ನವಾಗಿದೆ. ಈಗಾಗಲೇ ರಾಜ್ಯದಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಮುಸ್ಲಿಂ, ಕ್ರಿಶ್ಚಿಯನ್, ಪರಿಶಿಷ್ಟ ಜಾತಿ ಮತ್ತು ಪಂಗಡದವರು ಕಡಿಮೆ ಬೆಲೆಗೆ ದೊರೆಯುವ ಪೌಷ್ಟಿಕ ಆಹಾರದಿಂದಲೂ ವಂಚಿತರಾಗಲಿದ್ದಾರೆ ಎಂದರು.