ರಾಜ್ಯದಲ್ಲಿ ತಲೆದೋರಿರುವ ವಿದ್ಯುತ್ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ರೈತರು ಹಾಗೂ ಕೈಗಾರಿಕೋದ್ಯಮಿಗಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಮುಂದಿನ ಮೂರು ವರ್ಷಗಳ ಕಾಲ ನಿರಂತರವಾಗಿ ಒಂದು ಸಾವಿರ ಮೆಗಾ ವ್ಯಾಟ್ ವಿದ್ಯುತ್ ಖರೀದಿ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಂಗಳವಾರ ತಿಳಿಸಿದ್ದಾರೆ.
ಜಲಾಶಯಗಳು ತುಂಬಲಿ ಅಥವಾ ಬಿಡಲಿ, ರೈತರ ಹಾಗೂ ಕೈಗಾರಿಕೋದ್ಯಮಿಗಳಿಗೆ ತೊಂದರೆಯಾಗದಂತೆ ಒಂದು ಸಾವಿರ ಮೆಗಾವ್ಯಾಟ್ ವಿದ್ಯುತ್ ಅನ್ನು ಇಂದಿನಿಂದಲೇ ಖರೀದಿಸಲಾಗುವುದು ಎಂದರು.
ವಿಧಾನಸೌಧದ ಕೊಠಡಿಯಲ್ಲಿ ವಿವಿಧ ಇಲಾಖೆಗಳ ಸಚಿವರು ಮತ್ತು ಅಧಿಕಾರಿಗಳ ಸಭೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂದಿನ ಮೂರು ವರ್ಷಗಳ ಕಾಲ ನಿರಂತರವಾಗಿ ವಿದ್ಯುತ್ ಖರೀದಿ ಮಾಡುವುದರಿಂದ ವಿದ್ಯುತ್ ಸಮಸ್ಯೆ ನಿವಾರಣೆಯಾಗಲಿದೆ. ನಂತರ ವಿದ್ಯುತ್ ಕ್ಷೇತ್ರದಲ್ಲಿ ಸ್ವಾವಲಂಬನೆ ಸಾಧಿಸುವ ಗುರಿ ಹೊಂದಿರುವುದರಿಂದ ಪರಿಸ್ಥಿತಿ ನಿವಾರಣೆಯಾಗುವುದೆಂದು ಭರವಸೆ ವ್ಯಕ್ತಪಡಿಸಿದರು.
ವಿದ್ಯುತ್ ಸಮಸ್ಯೆ ನಿವಾರಿಸುವ ನೆಲೆಯಲ್ಲಿ ಹೆಚ್ಚುವರಿಯಾಗಿ ಸಾವಿರ ಮೆಗಾ ವ್ಯಾಟ್ ವಿದ್ಯುತ್ ಖರೀದಿಗೆ ಚಾಲನೆ ನೀಡಿದೆ. ಪ್ರತಿ ಯೂನಿಟ್‌ಗೆ 4.77 ರೂಪಾಯಿ ವೆಚ್ಚ ತಗುಲಿದೆ. ಇದರಲ್ಲಿ ಬೆಳಿಗ್ಗೆ 6ರಿಂದ ಸಂಜೆ 6ರವರೆಗೆ 500 ಮೆಗಾ ವ್ಯಾಟ್ ವಿದ್ಯುತ್ ಸರಬರಾಜು ಮಾಡುವುದಾಗಿ ತಿಳಿಸಿದರು. ಜಿಂದಾಲ್‌ನಿಂದ 450 ಮೆಗಾ ವ್ಯಾಟ್ ಮತ್ತು ಗುಜರಾತ್ ಹಾಗೂ ಬೇರೆ, ಬೇರೆ ಕಂಪನಿಗಳಿಂದ ವಿದ್ಯುತ್ ಖರೀದಿಸಲಾಗಿಸಲಾಗುವುದು ಎಂದರು.