ದೇಶಾದ್ಯಂತ ತೀವ್ರ ವಿವಾದ ಸೃಷ್ಟಿಸಿದ್ದ ರಾಮ ಮಂದಿರ ನಿರ್ಮಾಣ ಪ್ರಕರಣಕ್ಕೆ ಮತ್ತೆ ಜೀವ ಬಂದಿದ್ದು, ಮುಂದಿನ ಎರಡು ವರ್ಷಗಳಲ್ಲಿ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಮಾಡಲಾಗುವುದು ಎಂದು ವಿಶ್ವ ಹಿಂದೂ ಪರಿಷತ್‌ನ ಅಂತಾರಾಷ್ಟ್ರೀಯ ಮುಖಂಡ ಅಶೋಕ್ ಸಿಂಘಾಲ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 17 ವರ್ಷಗಳಿಂದ ರಾಮಜನ್ಮ ಭೂಮಿಯಲ್ಲಿ ಮಂದಿರ ರಾಮನಿರ್ಮಾಣಕ್ಕೆ ಹೋರಾಟ ನಡೆಸುತ್ತಿದ್ದು ನ್ಯಾಯಾಲಯದಲ್ಲಿ ಕಾನೂನು ಸಮರ ಕೂಡ ನಡೆಸಲಾಗಿದೆ.
ರಾಮಮಂದಿರ ನಿರ್ಮಾಣಕ್ಕೆ ಮತ್ತು ಹಿಂದೂಗಳಲ್ಲಿ ಜನಜಾಗೃತಿ ಮೂಡಿಸಲು ಹನುಮದ್ ಶಕ್ತಿ ಜಾಗರಣಾ ಅಭಿಯಾನವನ್ನು ಸೋಮವಾರದಿಂದ ಆರಂಭಿಸಲಾಗಿದೆ. ಈ ಅಭಿಯಾನ ಕಾಶ್ಮೀರದಿಂದ ಕನ್ಯಾಕುಮಾರಿ, ಅಸ್ಸಾಂನಿಂದ ಗುಜರಾತ್‌ವರೆಗೆ ಪ್ರವಾಸ ಮಾಡಿ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಿ ನ್ಯಾಯಾಲಯಕ್ಕೆ ಸಂಗ್ರಹಿಸಲಾಗುವುದು ಎಂದರು.
ಈ ಅಭಿಯಾನವನ್ನು ಕೇವಲ ರಾಜಕೀಯ ದುರುದ್ದೇಶದಿಂದ ಮಾಡುತ್ತಿಲ್ಲ. ರಾಮನ ಮೇಲಿನ ಭಕ್ತಿ ಭಾವದಿಂದ ಅಭಿಯಾನ ಕೈಗೊಂಡು ಮಂದಿರ ನಿರ್ಮಾಣಕ್ಕೆ ಮುಂದಾಗುತ್ತಿದ್ದೇವೆ. ಹಿಂದೂ ಧರ್ಮ ಮೂಲತ ಶಾಂತಿಯುತ ಧರ್ಮ. ಹಿಂಸೆಯ ಮೂಲಕ ಏನನ್ನೂ ಪಡೆಯಲು ಬಯಸುವುದಿಲ್ಲ ಎಂದು ಈ ಸಂದರ್ಭದಲ್ಲಿ ಹೇಳಿದರು.