ಸಿಎಂ ಕ್ಷಮೆ ಕೇಳ್ಲಿ, ನಾನು ಕೇಳೋಲ್ಲ: ಬಚ್ಚೇಗೌಡ ತಿರುಗೇಟು
ಬೆಂಗಳೂರು, ಬುಧವಾರ, 18 ಆಗಸ್ಟ್ 2010( 12:31 IST )
ಕಾರ್ಮಿಕ ಸಚಿವ ಬಚ್ಚೇಗೌಡರು ತನ್ನ ಕಾರನ್ನು ಓವರ್ ಟೇಕ್ ಮಾಡಿದ್ದನ್ನು ಪ್ರಶ್ನಿಸಿ ಉದ್ಯಮಿ ಭರತ್ ಮತ್ತು ಅವರ ಕುಟುಂಬದವರ ವಿರುದ್ಧ ಅವಾಚ್ಯ ಶಬ್ದಗಳಿಂದ ಬೈದು, ಗನ್‌ಮ್ಯಾನ್‌ನಿಂದ ಹೊಡೆಸಿದ ಪ್ರಕರಣಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕ್ಷಮೆಯಾಚಿಸಿದ್ದಾರೆ. ಆದರೆ ಸಚಿವ ಬಚ್ಚೇಗೌಡರು, ನಾನ್ಯಾಕೆ ಕ್ಷಮೆ ಕೇಳಬೇಕ್ರಿ ಎಂದು ಪ್ರಶ್ನಿಸಿದ್ದಾರೆ.
ಉದ್ಯಮಿ ಭರತ್ ಅವರ ವಿರುದ್ಧ ದಾಖಲಿಸಿರುವ ದೂರನ್ನು ವಾಪಸ್ ಪಡೆಯುವಂತೆ ಮುಖ್ಯಮಂತ್ರಿಗಳು ಸಚಿವ ಬಚ್ಚೇಗೌಡರಿಗೆ ಸಲಹೆ ನೀಡಿದ್ದರು. ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದ ಬಚ್ಚೆಗೌಡರು, ನಾನು ಯಾವುದೇ ಕಾರಣಕ್ಕೂ ದೂರನ್ನು ವಾಪಸ್ ಪಡೆಯಲಾರೆ. 'ನಿಜಕ್ಕೂ ಏನು ನಡೆಯಿತು ಎಂಬ ಬಗ್ಗೆ ಮುಖ್ಯಮಂತ್ರಿಗಳಿಗೆ ನಾನೇ ವಿವರಣೆ ನೀಡುತ್ತೇನೆ. ನಾನು ಯಾವುದೇ ತಪ್ಪು ಮಾಡಿಲ್ಲ. ಭರತ್ ತಪ್ಪು ಮಾಡಿದ್ದಾನೆ. ಹಾಗಾಗಿ ನಾನು ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ' ಎಂದು ತಮ್ಮ ಉಡಾಫೆ ಧೋರಣೆ ಮುಂದುವರಿಸಿದ್ದಾರೆ.
ಹಾಸನದಿಂದ ಬೆಂಗಳೂರಿಗೆ ಕಾರ್ಮಿಕ ಸಚಿವ ಬಚ್ಚೇಗೌಡರು ಕಾರಿನಲ್ಲಿ ವಾಪಸಾಗುತ್ತಿದ್ದ ವೇಳೆ ಉದ್ಯಮಿ ಭರತ್ ಕುಮಾರ್ ತನ್ನ ಕಾರನ್ನು ಓವರ್‌ಟೇಕ್ ಮಾಡಿದ್ದ ಎಂಬ ಕಾರಣಕ್ಕಾಗಿ ಭರತ್ ಕಾರನ್ನು ಅಡ್ಡಗಟ್ಟಿ, ಬಚ್ಚೇಗೌಡರು ಅವಾಚ್ಯ ಶಬ್ದಗಳಿಂದ ನಿಂದಿಸಿ, ಗನ್‌ಮ್ಯಾನ್‌ನಿಂದ ಹೊಡೆಸಿದ್ದರು. ಅಷ್ಟೇ ಅಲ್ಲ ನೆಲಮಂಗಲ ಠಾಣೆಯಲ್ಲಿ ಭರತ್ ಮೇಲೆ ದೂರು ದಾಖಲಿಸಿದ್ದರು.
ಉದ್ಯಮಿ ಭರತ್ ಓವರ್ ಟೇಕ್ ಮಾಡಿದ ಎಂಬ ಕಾರಣಕ್ಕೇ ಹಲ್ಲೆ ನಡೆಸಿದ ಸಚಿವ ಬಚ್ಚೇಗೌಡರ ನಡವಳಿಕೆ ಬಗ್ಗೆ ರಾಜಕೀಯ ವಲಯ ಸೇರಿದಂತೆ ಸಾರ್ವಜನಿಕವಾಗಿ ತೀವ್ರ ಟೀಕೆ ವ್ಯಕ್ತವಾಗಿತ್ತು.
ಇವರ ಸಾಲಿಗೆ ಬಚ್ಚೇಗೌಡ ಸೇರ್ಪಡೆ!: ಆಡಳಿತಾರೂಢ ಬಿಜೆಪಿ ಸರಕಾರದಲ್ಲಿನ ಅಬಕಾರಿ ಸಚಿವ ರೇಣುಕಾಚಾರ್ಯ ಈ ಹಿಂದೆ ನರ್ಸ್ ಜಯಲಕ್ಷ್ಮಿ ಜೊತೆಗಿನ ರಾಸಲೀಲೆ ಫೋಟೋಗಳು ಮಾಧ್ಯಮದಲ್ಲಿ ಹರಿದಾಡುವ ಮೂಲಕ ಸಾಕಷ್ಟು ವಿವಾದ ಸೃಷ್ಟಿಸಿತ್ತು. ನಂತರ ಈ ಪ್ರಕರಣ ಕೋರ್ಟ್ ಮೆಟ್ಟಿಲೇರಿತ್ತು. ನಂತರ ಎಸ್.ಎನ್.ಕೃಷ್ಣಯ್ಯ ಸೆಟ್ಟಿ ಮುಜರಾಯಿ ಇಲಾಖೆ ಸಚಿವರಾಗಿದ್ದ ಸಂದರ್ಭದಲ್ಲಿ ಮುಜರಾಯಿ ಇಲಾಖೆಗೆ ಒಳಪಟ್ಟ ಎಲ್ಲಾ ದೇವಾಲಯಗಳಲ್ಲೂ ಮುಖ್ಯಮಂತ್ರಿ ಯಡಿಯೂರಪ್ಪ ಹೆಸರಿನಲ್ಲಿ ಬೆಳಿಗ್ಗೆ ಪೂಜೆ ಸಲ್ಲಿಸಬೇಕೆಂದು ಫರ್ಮಾನು ಹೊರಡಿಸಿದ್ದರು. ಇದು ಕೂಡ ಸಾಕಷ್ಟು ವಿವಾದ ಹುಟ್ಟು ಹಾಕಿದ ನಂತರ ಆದೇಶವನ್ನು ವಾಪಸ್ ಪಡೆಯಲಾಗಿತ್ತು.
ಸಮಾಜ ಕಲ್ಯಾಣ ಸಚಿವ ಡಿ.ಸುಧಾಕರ್ ಅವರ ಮೇಲೆ ವಂಚನೆ ಪ್ರಕರಣ ದಾಖಲಾಗಿದ್ದು, ಸಿಬಿಐ ವಿಚಾರಣೆ ನಡೆಸುತ್ತಿದೆ. ಸ್ನೇಹಿತನ ಪತ್ನಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದಲ್ಲಿ ಸಚಿವ ಹರತಾಳು ಹಾಲಪ್ಪ ಪ್ರಕರಣ ವಿಚಾರಣೆಯಲ್ಲಿದೆ. ಕಂದಾಯ ಸಚಿವ ಕರುಣಾಕರ ರೆಡ್ಡಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಕಂಸ ಎಂದು ಬಹಿರಂಗ ಹೇಳಿಕೆ ನೀಡಿದ್ದರು. ನಂತರ ಹಿರಿಯ ರಾಜಕಾರಣಿ ಎಂ.ಪಿ.ಪ್ರಕಾಶ್ ಅವರನ್ನು ಸಚಿವ ಜನಾರ್ದನ ರೆಡ್ಡಿ ಸಾವಿಗೆ ಹತ್ತಿರವಾಗಿರುವ ವ್ಯಕ್ತಿ ಎಂದು ಅವಮಾನಕಾರಿಯಾಗಿ ಮಾತನಾಡಿದ್ದರು. ಇದೀಗ ಸಚಿವ ಬಚ್ಚೇಗೌಡರು ಆ ಸಾಲಿಗೆ ಸೇರ್ಪಡೆಗೊಂಡಿದ್ದಾರೆ.