ಗುಲ್ಬರ್ಗ ಚುನಾವಣೆ: ಉದ್ಯಮಿ ಕುಲಕರ್ಣಿ ಕಾಂಗ್ರೆಸ್ ಅಭ್ಯರ್ಥಿ?
ಗುಲ್ಬರ್ಗ, ಬುಧವಾರ, 18 ಆಗಸ್ಟ್ 2010( 17:59 IST )
ಮುಂದಿನ ತಿಂಗಳು ಗುಲ್ಬರ್ಗ ದಕ್ಷಿಣ ಕ್ಷೇತ್ರಕ್ಕೆ ನಡೆಯುವ ಚುನಾವಣೆಗೆ ಕಾಂಗ್ರೆಸ್ ಪಕ್ಷವು ಬ್ರಾಹ್ಮಣ ಅಭ್ಯರ್ಥಿಯನ್ನು ಕಣಕ್ಕಿಳಿಸಬೇಕೆಂದು ಪಕ್ಷದ ಒಂದು ಗುಂಪು ವರಿಷ್ಠರಿಗೆ ಒತ್ತಡ ಹೇರಿದೆ. ಇದಕ್ಕೆ ಜಿಲ್ಲೆಯ ಕೆಲವು ಕಾಂಗ್ರೆಸ್ ಶಾಸಕರೂ ತಮ್ಮ ಒಲವು ತೋರಿದ್ದಾರೆ ಎಂದು ಹೇಳಲಾಗುತ್ತಿದೆ.
ಉದ್ಯಮಿ ಕೃಷ್ಣಾಜಿ ಕುಲಕರ್ಣಿ ಮತ್ತು ಡಾ. ವಿಜಯ ಕುಮಾರ್ ಕಲ್ಮಣಕರ್ ಹೆಸರುಗಳು ಕಾಂಗ್ರೆಸ್ ಪಕ್ಷದ ಜಿಲ್ಲಾ ಘಟಕದ ಪಟ್ಟಿಯಲ್ಲಿವೆ ಎನ್ನಲಾಗಿದೆ. ಇವರಲ್ಲಿ ಯಾರಿಗಾದರೂ ಒಬ್ಬರಿಗೆ ಟಿಕೆಟ್ ಕೊಟ್ಟರೆ ಅವರನ್ನು ಗೆಲ್ಲಿಸುವ ಹೊಣೆಗಾರಿಕೆ ತಮ್ಮದು ಎಂದು ಈ ಪ್ರಮುಖರು ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಈ ಮಧ್ಯೆ ದೆಹಲಿಯಲ್ಲಿ ಬೀಡು ಬಿಟ್ಟಿರುವ ಮಾಜಿ ಸಚಿವ ಖಮರುಲ್ ಇಸ್ಲಾಂ ಸೇರಿದಂತೆ ಕೆಲ ಮುಖಂಡರು, ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ ಜತೆ ಚುನಾವಣೆ ಕುರಿತಂತೆ ಚರ್ಚಿಸಿ ನೀವು ತೆಗೆದುಕೊಳ್ಳುವ ಯಾವುದೇ ನಿರ್ಧಾರಕ್ಕೆ ನಾವು ಬದ್ಧ, ಬ್ರಾಹ್ಮಣ ಸಮುದಾಯದವರು ತಮಗೊಂದು ಅವಕಾಶ ಕೊಡಿ ಎಂದು ಕೇಳುತ್ತಿದ್ದಾರೆ. ಆದ್ದರಿಂದ ಅವರಿಗೊಂದು ಅವಕಾಶ ಕೊಟ್ಟರೂ ತಪ್ಪಿಲ್ಲ ಎಂದು ತಮ್ಮ ಅಭಿಪ್ರಾಯ ಪಟ್ಟಿದ್ದಾರೆ ಎನ್ನಲಾಗಿದೆ.
ಟಿಕೆಟ್ ನೀಡುವ ಕುರಿತಂತೆ ತಾವೊಬ್ಬರೇ ನಿರ್ಧಾರ ತೆಗೆದುಕೊಳ್ಳುವುದಿಲ್ಲ. ಮಾಜಿ ಮುಖ್ಯಮಂತ್ರಿ ಎನ್. ಧರ್ಮಸಿಂಗ್, ಶರಣಬಸಪ್ಪ ದರ್ಶನಾಪುರ್, ಮಾಲೀಕಯ್ಯ ಗುತ್ತೇದಾರ, ಡಾ. ಶರಣ ಪ್ರಕಾಶ ಪಾಟೀಲ್, ಜಿಲ್ಲಾ ಕಾಂಗ್ರೆಸ್ ಪಕ್ಷದ ಅಧ್ಯಕ್ಷರೂ ಆಗಿರುವ ಶಾಸಕ ಅಲ್ಲಮಪ್ರಭು ಪಾಟೀಲ್ ಸೇರಿದಂತೆ ಪ್ರಮುಖರ ಜತೆ ಚರ್ಚಿಸಿ ಕ್ರಮ ಕೈಕೊಳ್ಳುವುದಾಗಿ ಖರ್ಗೆಯವರು ಖಮರುಲ್ ಅವರಿಗೆ ತಿಳಿಸಿದ್ದಾರೆ.
ಆ.20ರಂದು ಪಕ್ಷದ ಮತ್ತೊಂದು ಸುತ್ತಿನ ಸಭೆ ಗುಲ್ಬರ್ಗದಲ್ಲಿ ನಡೆಯಲಿದೆ. ಅಂದು ಅಭ್ಯರ್ಥಿಯನ್ನು ಅಂತಿಮಗೊಳಿಸುವ ಸಾಧ್ಯತೆಗಳು ಇವೆ. ಅಭ್ಯರ್ಥಿ ಯಾರೇ ಆಗಲಿ ಅವರನ್ನು ಗೆಲ್ಲಿಸುವ ಹೊಣೆಗಾರಿಕೆ ಮಾತ್ರ ಎಲ್ಲರ ಮೇಲೂ ಇದೆ ಎಂದು ಪಕ್ಷದ ವರಿಷ್ಠರು ಹೇಳಿದ್ದಾರೆ.