ಜನ್ಮ ನೀಡಿದ ತಾಯಿಯೇ ತನ್ನ ಕರುಳ ಕುಡಿಯನ್ನು ಹತ್ಯೆಗೈದ ಅಮಾನವೀಯ ಘಟನೆ ರಾಜೋಳಾದಲ್ಲಿ ಮಂಗಳವಾರ ನಡೆದಿದೆ.
ಸೋಮವಾರ ರಾತ್ರಿ ಹೆಣ್ಣು ಮಗುವಿಗೆ ಜನ್ಮ ನೀಡಿದ ಈ ತಾಯಿ, ಮಗುವಿನ ಕುತ್ತಿಗೆಗೆ ವೈರ್ ಮತ್ತು ಕರುಳ ಬಳ್ಳಿ ಬಿಗಿದು ಪ್ರಾಣ ತೆಗೆದಿದ್ದಾಳೆ. ಮಗುವಿನ ಶವನನ್ನು ಮನೆ ಸಮೀಪದ ಹಾಳು ಮನೆಯೊಂದರ ಮೂಲೆಯಲ್ಲಿ ಹೂತಿದ್ದು, ನಾಯಿ ಕೆದರಿ ಎಳೆದು ತಿಂದಿದ್ದರಿಂದ ತಿಪ್ಪೆಯಲ್ಲಿ ಶವ ಪತ್ತೆ ಆಗಿದೆ.
ಗ್ರಾಮದ ಮಾಣಿಕಮ್ಮ ದಶರಥ ಎಂಬಾಕೆಯೇ ಈ ನತದೃಷ್ಟ ಹಸುಗೂಸಿನ ತಾಯಿ. ಈಕೆ ಪತಿ ಮೃತಪಟ್ಟು ಕೆಲ ವರ್ಷಗಳೇ ಆಗಿದೆ. ಎರಡು (ಒಂದು ಗಂಡು-ಒಂದು ಹೆಣ್ಣು) ಮಕ್ಕಳೊಂದಿಗೆ ಗ್ರಾಮದಲ್ಲಿ ವಾಸವಾಗಿದ್ದಾಳೆ. ಈ ಮಧ್ಯೆ ಬೇರೆ ವ್ಯಕ್ತಿಯೊಂದಿಗಿನ ಅನೈತಿಕ ಸಂಬಂಧದಿಂದ ಈ ಮಗು ಹುಟ್ಟಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಜಿಲ್ಲಾ ಹೆಚ್ಚುವರಿ ಎಸ್ಪಿ ಮರ್ತೂರಕರ್, ಡಿವೈಎಸ್ಪಿ ಅಂಬಣ್ಣ ಚಿಪ್ಪಾರ, ಸಿಪಿಐ ಸಿದ್ಧಲಿಂಗಪ್ಪಗೌಡ ಪಾಟೀಲ್, ಪಿಎಸ್ಐ ದಿಲೀಪ್ ಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.