ರಾಜಕೀಯದಲ್ಲಿ ಕಾಲೆಳೆಯುವ ಪ್ರವೃತ್ತಿ ಹೆಚ್ಚಾಗುತ್ತಿದೆ: ಯಡಿಯೂರಪ್ಪ
ಬೆಂಗಳೂರು, ಗುರುವಾರ, 19 ಆಗಸ್ಟ್ 2010( 09:32 IST )
ರಾಜಕೀಯದಲ್ಲಿ ಸೇಡಿನ ಮನೋಭಾವ ಹೆಚ್ಚಾಗುತ್ತಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತೀವ್ರ ವಿಷಾದ ವ್ಯಕ್ತಪಡಿಸಿದ್ದಾರೆ.
ಉತ್ತಮ ಕೆಲಸ ಮಾಡಲು ಹೊರಟರೆ ನಮ್ಮನ್ನು ಬಿಡುವುದಿಲ್ಲ. ಅವರೂ ಕೂಡ ಮಾಡುವುದಿಲ್ಲ. ಎಲ್ಲೆಡೆ ಕಾಲೆಳೆಯುವ ಪ್ರವೃತ್ತಿ ಹೆಚ್ಚಾಗುತ್ತಿದೆ. ಇದು ಸರಿಯಾದ ಕ್ರಮವಲ್ಲ ಎಂದು ಪರೋಕ್ಷವಾಗಿ ವಿರೋಧ ಪಕ್ಷಗಳ ಮೇಲೆ ಕಿಡಿಕಾರಿದರು.
ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕಾರ್ಮಿಕ ನಾಯಕ ಆಲಂಪಲ್ಲಿ ವೆಂಕಟರಾಮ್ ಕಾರ್ಮಿಕ ಸಂಶೋಧನಾ ಪೀಠ ಉದ್ಘಾಟಿಸಿ ಅವರು ಮಾತನಾಡಿದರು. ಕಾರ್ಮಿಕ ಕ್ಷೇತ್ರ ಇಂದು ನಿರ್ಲಕ್ಷ್ಯಕ್ಕೆ ಒಳಗಾಗಿದೆ. ವಿಧಾನಮಂಡಲ ಮತ್ತು ಸಂಸತ್‌ನಲ್ಲಿ ಕಾರ್ಮಿಕರ ಬಗ್ಗೆ ಚರ್ಚೆ ನಡೆಯದಿರುವುದು ವಿಷಾದನೀಯ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕಾರ್ಮಿಕರು ಮತ್ತು ಮಾಲೀಕರ ನಡುವೆ ಯಾವಾಗಲೂ ಅನೋನ್ಯವಾದ ಸಂಬಂಧ ಇರಬೇಕು. ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಕಾರ್ಮಿಕರು ಶಾಂತ ರೀತಿಯಲ್ಲಿ ಹೋರಾಟ ನಡೆಸಬೇಕು. ಒಂದು ವೇಳೆ ಕಾರ್ಖಾನೆ ಮುಚ್ಚಿದರೆ ಅದು ಉತ್ಪಾದನೆ ಮತ್ತು ಆರ್ಥಿಕ ವ್ಯವಸ್ಥೆ ಮೇಲೂ ಪರಿಣಾಮ ಬೀರುತ್ತದೆ. ಮಾಲೀಕರಾದವರು ಕೂಡ ಕಾರ್ಮಿಕರ ಜತೆ ಉತ್ತಮ ಸಂಬಂಧ ಇಟ್ಟುಕೊಂಡರೆ ಅಭಿವೃದ್ಧಿ ಸಾಧ್ಯ ಎಂದರು.