ಮಂಗಳೂರು ವಿಮಾನ ನಿಲ್ದಾಣ ಬಳಿ ಸಂಭವಿಸಿದ ಐಎಕ್ಸ್ 812 ವಿಮಾನ ದುರಂತದ ಕೊನೆಯ ಕ್ಷಣದಲ್ಲಿ ಏನು ನಡೆಯಿತು ?ಸಹ ಪೈಲಟ್ ಸಲಹೆಯನ್ನು ಕೇಳಿದ್ದರೆ ಅಪಾಯ ತಪ್ಪುತ್ತಿತ್ತೇ ?ಇದು ಪೈಲಟ್ ತಪ್ಪು ನಿರ್ಧಾರದಿಂದ ನಡೆಯಿತೇ? ಎಂಬ ಜಿಜ್ಞಾಸೆಗೆ ಇದೀಗ ಉತ್ತರ ದೊರೆತಿದೆ. ವಿಮಾನ ದುರಂತಕ್ಕೆ ಈಡಾಗುವ ಮುನ್ನ ಪೈಲಟ್ ಮತ್ತು ಎಟಿಸಿ ನಡುವಿನ ಸಂಭಾಷಣೆ ಅವೆಲ್ಲವನ್ನು ಬಹಿರಂಗಗೊಳಿಸಿದೆ.
'ಗೋ ಅರೌಂಡ್ ಕ್ಯಾಪ್ಟನ್...ಕಂಟ್ರೋಲ್, ಕಂಟ್ರೋಲ್' ಎಂಬ ಗಾಬರಿಯ ನುಡಿಗಳು ಏರ್ ಇಂಡಿಯಾ ಕಾಕ್‌ಪಿಟ್‌ನಲ್ಲಿ ದಾಖಲಾದ ಕೊನೆಯ ಪದಗಳು. ಮೇ 22ರಂದು ಬಜ್ಪೆಯ ವಿಮಾನ ನಿಲ್ದಾಣ ಸಮೀಪ ಸಂಭವಿಸಿದ ವಿಮಾನ ದುರಂತದಲ್ಲಿ 158 ಮಂದಿ ಸಾವನ್ನಪ್ಪಿದ್ದರು.
ಇಡೀ ದೇಶವೇ ಬೆಚ್ಚಿಬಿದ್ದಿದ್ದ ಈ ವಿಮಾನ ದುರಂತದಲ್ಲಿ ನೂರಾರು ಕನಸುಗಳನ್ನು ಹೊತ್ತು ಬಂದಿದ್ದವರು ಬಲಿಯಾಗಿದ್ದರು. ಇದು ದೇಶದ ಮೂರನೇ ಅತಿ ದೊಡ್ಡ ದುರಂತವಾಗಿತ್ತು. ಈ ಘಟನೆಯ ನಂತರ ದುರಂತಕ್ಕೆ ಕಾರಣ ಏನು?ಪೈಲಟ್ ತಪ್ಪು ನಿರ್ಧಾರದಿಂದ ದುರಂತ ಸಂಭವಿಸಿತ್ತೇ ?ಎಂಬ ಹಲವಾರು ಪ್ರಶ್ನೆಗಳು ಕೇಳಿ ಬಂದಿದ್ದವು. ಅಷ್ಟೇ ಅಲ್ಲ ವಿಮಾನದ ಬ್ಲ್ಯಾಕ್ ಬಾಕ್ಸ್ ಮತ್ತು ವೈಸ್ ರೆಕಾರ್ಡ್ ಅನ್ನು ಕೊನೆಗೂ ಪತ್ತೆ ಹಚ್ಚುವಲ್ಲಿ ಅಧಿಕಾರಿಗಳು ಯಶಸ್ವಿಯಾಗಿದ್ದರು. ಇದೀಗ ಕಾಕ್‌ಪಿಟ್‌ನಲ್ಲಿ ದಾಖಲಾದ ಸಂಭಾಷಣೆ ಘಟನೆಯ ದೋಷವನ್ನು ಬಿಚ್ಚಿಟ್ಟಿದೆ.
ಮಂಗಳೂರು ಏರಿಯಾ ಕಂಟ್ರೋಲ್ ಸೆಂಟರ್ ಮತ್ತು ಪೈಲಟ್ ನಡುವಿನ ಸಂಭಾಷಣೆಯ ಮುದ್ರಿತ ವಿವರಗಳನ್ನು ಏರ್ ಇಂಡಿಯಾ ಎಕ್ಸ್‌ಪ್ರೆಸ್ 812 ವಿಮಾನ ಅಪಘಾತದ ತನಿಖೆ ನಡೆಸುತ್ತಿರುವ ಕೇಂದ್ರ ತನಿಖಾ ತಂಡ, ಮಂಗಳೂರು ವಿಮಾನ ನಿಲ್ದಾಣದಲ್ಲಿ ನಡೆದಿರುವ ಸಾರ್ವಜನಿಕ ವಿಚಾರಣೆಯ ಎರಡನೇ ದಿನವಾದ ಬುಧವಾರ ಬಿಡುಗಡೆ ಮಾಡಿದೆ.
ವಿಮಾನದ ಸಹ ಪೈಲಟ್ ಇನ್ನೊಂದು ಸುತ್ತು ಹಾಕೋಣ ಎಂದು ಹೇಳುವ 19 ಸೆಕೆಂಡು ಮೊದಲು ಎಟಿಸಿ ಟವರ್‌ನಿಂದ ಗಾಳಿ ಶಾಂತವಾಗಿದ್ದು, ರನ್‌ವೇ 24 ಲ್ಯಾಂಡ್ ಆಗಲು ಮುಕ್ತವಾಗಿದೆ ಎಂಬ ಸಂದೇಶ ಬಂದಿತ್ತು. ಮೂರು ಸೆಕೆಂಡ್‌ಗಳ ನಂತರ ಏರ್ ಇಂಡಿಯಾ ಲ್ಯಾಂಡ್ ಆಗಲು ಸಜ್ಜಾಗಿದೆ ಎಂದು ಪೈಲಟ್ ಸಂದೇಶ ರವಾನಿಸಿದ್ದರು.
ವಿಮಾನ ಲ್ಯಾಂಡ್ ಆಗುವ ಮುನ್ನ ಅಪಾಯ ಅರಿತ ಸಹ ಪೈಲಟ್, ವಿಮಾನ ರನ್ ವೇ ಮೇಲೆ ಇಳಿಸಬೇಡಿ, ಪುನಃ ಮೇಲಕ್ಕೆ ಹಾರಿಸಿ ಎನ್ನುತ್ತಾರೆ. ಆದರೆ ಅಷ್ಟರಲ್ಲಿ ಪೈಲಟ್ ವಿಮಾನ ಲ್ಯಾಂಡ್ ಮಾಡುವ ನಿರ್ಧಾರ ಕೈಗೊಂಡಾಗಿತ್ತು. ಹಾಗೇ ಲ್ಯಾಂಡ್ ಆಗುತ್ತಿದ್ದಂತೆಯೇ ವಿಮಾನ ಸಮೀಪದ ಗುಡ್ಡಕ್ಕೆ ಡಿಕ್ಕಿ ಹೊಡೆಯುವ ಮೂಲಕ ದುರ್ಘಟನೆ ಸಂಭವಿಸಿತ್ತು.
6ಗಂಟೆ 4ನಿಮಿಷಕ್ಕೆ ಸಹ ಪೈಲಟ್ ದಯವಿಟ್ಟು ಲ್ಯಾಂಡ್ ಮಾಡಬೇಡಿ, ಕಂಟ್ರೋಲ್, ಕಂಟ್ರೋಲ್ ಎಂದು ಗಾಬರಿಯಿಂದ ಕೂಗಿಕೊಂಡಿರುವ ಕೊನೆಯ ಸಂದೇಶ ಕಾಕ್‌ಪಿಟ್‌ನಲ್ಲಿ ದಾಖಲಾಗಿತ್ತು. 6ಗಂಟೆ 5ನಿಮಿಷಕ್ಕೆ ವಿಮಾನ ದುರಂತಕ್ಕೆ ಈಡಾಗಿತ್ತು. ಕ್ಯಾಪ್ಟನ್ ಎಟಿಸಿಯ ಸೂಚನೆಯನ್ನು ಸರಿಯಾಗಿ ಪಾಲಿಸಿದ್ದರೆ ಈ ದುರಂತ ತಪ್ಪಿಸಬಹುದಿತ್ತು ಎಂಬುದು ಪೈಲಟ್ ಮತ್ತು ಎಟಿಸಿ ನಡುವಿನ ಸಂಭಾಷಣೆ ಬಹಿರಂಗಗೊಳಿಸಿದೆ.