ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಲ್ಲಿನ ಅವ್ಯವಹಾರ ತಡೆಗಟ್ಟಲು ಜಾರಿಗೆ ತಂದಿರುವ ಓಂಬುಡ್ಸ್‌ಮನ್ ಹುದ್ದೆ ಅಲಂಕರಿಸಲು ನಿವೃತ್ತ ನ್ಯಾಯಮೂರ್ತಿಗಳು ಮುಂದೆ ಬರುತ್ತಿಲ್ಲ. ಆದ್ದರಿಂದ ನೇಮಕದಲ್ಲಿ ವಿಳಂಬವಾಗುತ್ತಿದೆ ಎಂದು ಪಂಚಾಯತ್ ರಾಜ್ ಮತ್ತು ಗ್ರಾಮಾಭಿವೃದ್ದಿ ಸಚಿವ ಜಗದೀಶ ಶೆಟ್ಟರ್ ತಿಳಿಸಿದ್ದಾರೆ.
ನಗರದಲ್ಲಿ ತಮ್ಮ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಓಂಬುಡ್ಸ್‌ಮನ್ ಹುದ್ದೆಗೆ ನಿವೃತ್ತ ನ್ಯಾಯಮೂರ್ತಿಗಳನ್ನೇ ನೇಮಿಸಬೇಕು ಎನ್ನುವುದು ಸರಕಾರ ನಿಲುವಾಗಿದೆ. ಆದರೆ ಈ ಹುದ್ದೆಗೆ ಅವರೇ ಬರುತ್ತಿಲ್ಲ. ಹೀಗಾಗಿ, ಸ್ವತಃ ತಾವೇ ನಿವೃತ್ತ ನ್ಯಾಯ ಮೂರ್ತಿಗಳನ್ನು ಕೇಳಿಕೊಂಡರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.
ಈವರೆಗೆ ಓಂಬುಡ್ಸ್‌ಮನ್ ನೇಮಕಕ್ಕೆ ಬಂದ 15 ಅರ್ಜಿಗಳಲ್ಲಿ, ಆರು ನಿವೃತ್ತ ನ್ಯಾಯಮೂರ್ತಿಗಳನ್ನು ಜಿಲ್ಲೆಯೊಂದಕ್ಕೆ ನಿಯೋಜಿಸಲಾಗಿದೆ. ಉಳಿದ ಅರ್ಜಿಗಳಲ್ಲಿ ಕೆಲ ಅಡ್ಡಿಗಳಿವೆ. ಇವುಗಳನ್ನು ಬಿಟ್ಟರೆ, ಇತರ ಜಿಲ್ಲೆಗಳಿಂದ ಯಾವುದೇ ಅರ್ಜಿ ಬಂದಿಲ್ಲ. ಓಂಬುಡ್ಸ್‌ಮನ್‌ಗಳು ನರೇಗಾ ಯೋಜನೆಯ ಸಂಬಂಧಿಸಿದ ದೂರಗಳನ್ನು ಸ್ವೀಕರಿಸಿ, ಅವುಗಳ ಕುರಿತು ಸ್ಥಳ ಪರಿಶೀಲನೆ, ವಿಚಾರಣೆ ಕೈಗೊಂಡು ಮುಖ್ಯ ಕಾರ್ಯದರ್ಶಿಗೆ ವರದಿ ಸಲ್ಲಿಸಬೇಕು. ಇದನ್ನು ಆದರಿಸಿ ಸರಕಾರ ಮುಂದಿನ ಕ್ರಮ ಕೈಗೊಳ್ಳುವುದು ಎಂದರು.
ನರೇಗಾದಲ್ಲಿ ಅವ್ಯವಹಾರ ಆಗದಂತೆ ನೋಡಿಕೊಳ್ಳಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು. ಈ ಮೂಲಕ ಯೋಜನೆಯ ಮೂಲ ಉದ್ದೇಶ ಅನುಷ್ಠಾನಕ್ಕೆ ತರಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.