ರೆಡ್ಡಿ, ಶ್ರೀರಾಮುಲು ವಿರುದ್ಧದ ಪ್ರಕರಣ ವಾಪಸಾತಿಗೆ ಕೋರ್ಟ್ ತಡೆ
ಧಾರವಾಡ, ಗುರುವಾರ, 19 ಆಗಸ್ಟ್ 2010( 18:15 IST )
ಆರೋಗ್ಯ ಸಚಿವ ಶ್ರೀರಾಮುಲು ಮತ್ತು ಪ್ರವಾಸೋದ್ಯಮ ಸಚಿವ ಜನಾರ್ದನ ರೆಡ್ಡಿ ಅವರ ವಿರುದ್ಧ ದಾಖಲಾದ ಪ್ರಕರಣವನ್ನು ಹಿಂಪಡೆಯುವ ರಾಜ್ಯ ಸರಕಾರದ ನಿರ್ಧಾರಕ್ಕೆ ಇಲ್ಲಿನ ಸಂಚಾರಿ ಹೈಕೋರ್ಟ್ ಪೀಠ ತಡೆಯಾಜ್ಞೆ ನೀಡಿದೆ.
ಚುನಾವಣೆ ಸಂದರ್ಭದಲ್ಲಿ ಶ್ರೀರಾಮುಲು ಮತ್ತು ರೆಡ್ಡಿ ವಿರುದ್ಧ ಬಳ್ಳಾರಿಯಲ್ಲಿ ದಾಖಲಾಗಿದ್ದ ಚುನಾವಣಾ ಅಕ್ರಮ ಪ್ರಕರಣ ದಾಖಲಾಗಿತ್ತು. ಈ ಪ್ರಕರಣವನ್ನು ರಾಜ್ಯ ಸಚಿವ ಸಂಪುಟ ಹಿಂಪಡೆಯಲು ನಿರ್ಧರಿಸಿ ಬಳ್ಳಾರಿ ಜಿಲ್ಲಾ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿತ್ತು.
ಈ ಮೊದಲು ನ್ಯಾಯಾಲಯ ಈ ಪ್ರಕರಣಗಳ ವಾಪಸಾತಿಗೆ ಅನುಮತಿ ಕೂಡ ನೀಡಿತ್ತು. ಆದರೆ ಚುನಾವಣಾ ಆಯೋಗ ಈ ವಾಪಸಾತಿ ಅನುಮತಿಯನ್ನು ಪ್ರಶ್ನಿಸಿ ಸಂಚಾರಿ ಹೈಕೋರ್ಟ್ ಪೀಠದಲ್ಲಿ ಮೇಲ್ಮನವಿ ಸಲ್ಲಿಸಿತ್ತು.
ಗುರುವಾರ ಸಂಚಾರಿ ಹೈಕೋರ್ಟ್ ಪೀಠದ ನ್ಯಾಯಮೂರ್ತಿ ಅರಳಿ ನಾಗರಾಜ ಅವರು ಈ ಕುರಿತಂತೆ ವಿಚಾರಣೆ ನಡೆಸಿ ರಾಜ್ಯ ಸರಕಾರದ ನಿರ್ಧಾರಕ್ಕೆ ತಡೆಯಾಜ್ಞೆ ನೀಡಿ ಈ ಸಚಿವದ್ವಯರ ಮೇಲಿರುವ ಯಾವುದೇ ಪ್ರಕರಣವನ್ನು ವಾಪಸ್ ಪಡೆಯಬಾರದೆಂದು ಆದೇಶ ನೀಡಿದ್ದಾರೆ. ಪ್ರಕರಣದ ವಿಚಾರಣೆಯನ್ನು ಸೆಪ್ಟೆಂಬರ್ 25ಕ್ಕೆ ಮುಂದೂಡಿದ್ದಾರೆ. ಇದರಿಂದಾಗಿ ಗಣಿಧಣಿಗಳಿಗೆ ಮತ್ತೆ ಹಿನ್ನಡೆ ಉಂಟಾದಂತಾಗಿದೆ.