ರಾಜ್ಯಾದ್ಯಂತ ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ದೇವಾಲಯಗಳಲ್ಲಿ ವಿಶೇಷ ಪೂಜೆ, ಪುನಸ್ಕಾರ ನಡೆಯುತ್ತಿದ್ದು, ಮತ್ತೊಂದೆಡೆ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಬಿಜೆಪಿ ನಾಯಕಿ ಸುಷ್ಮಾ ನಾಯಕಿ ಬಳ್ಳಾರಿಯಲ್ಲಿನ ವರಮಹಾಲಕ್ಷ್ಮಿ ಪೂಜೆಗೆ ಆಗಮಿಸಿದ್ದಾರೆ.
ಅಕ್ರಮ ಗಣಿಗಾರಿಕೆಯನ್ನು ಸಿಬಿಐಗೆ ಒಪ್ಪಿಸಬೇಕೆಂದು ಕಾಂಗ್ರೆಸ್ ಮುಖಂಡರು ಬೆಂಗಳೂರಿನಿಂದ ಬಳ್ಳಾರಿ ತನಕ ಪಾದಯಾತ್ರೆ ನಡೆಸಿ ಬೃಹತ್ ಸಮಾವೇಶ ನಡೆಸಿದ್ದರು. ಅದಕ್ಕೆ ತಕ್ಕ ಪ್ರತ್ಯುತ್ತರ ಎಂಬಂತೆ ಶುಕ್ರವಾರ ವರಮಹಾಲಕ್ಷ್ಮಿ ಪೂಜೆ ಹಾಗೂ ಬಿಜೆಪಿ ಜನಜಾಗೃತಿ ಸಮಾವೇಶ ಹಮ್ಮಿಕೊಂಡಿದೆ. ಅಷ್ಟೇ ಅಲ್ಲ ಸಾಮೂಹಿಕ ವಿವಾಹ ಸಮಾರಂಭ ಕೂಡ ನಡೆಯಲಿದೆ.
ಇಂದಿನ ಬೃಹತ್ ಜನಜಾಗೃತಿ ಸಮಾವೇಶದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ, ಸಂಸದ ಅನಂತ ಕುಮಾರ್, ವೆಂಕಯ್ಯ ನಾಯ್ಡು, ಬಿಜೆಪಿ ರಾಜ್ಯಾಧ್ಯಕ್ಷ ಕೆ.ಎಸ್.ಈಶ್ವರಪ್ಪ ಸೇರಿದಂತೆ ಹಲವು ನಾಯಕರು ಭಾಗವಹಿಸಲಿದ್ದಾರೆ.
ನಗರದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ ಹಾಗೂ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮಗಳು ಮತ್ತು ಸಮಾವೇಶ ಏಕಕಾಲದಲ್ಲಿ ನಡೆಯುವುದರಿಂದ ಎಲ್ಲೆಡೆ ಪೊಲೀಸ್ ಸರ್ಪಗಾವಲು ಹಾಕಲಾಗಿದೆ. ಸ್ಥಳೀಯ ಮುನ್ಸಿಪಲ್ ಕಾಲೇಜು ಮೈದಾನದಲ್ಲಿ ಸಮಾವೇಶಕ್ಕೆ ಬೃಹತ್ ವೇದಿಕೆ ನಿರ್ಮಿಸಲಾಗಿದೆ. ನಗರದಾದ್ಯಂತ ಸುಷ್ಮಾ ಸ್ವರಾಜ್, ಜನಾರ್ದನ ರೆಡ್ಡಿ, ಶ್ರೀರಾಮುಲು, ಕರುಣಾಕರ ರೆಡ್ಡಿ ಮತ್ತು ಮುಖ್ಯಮಂತ್ರಿ ಯಡಿಯೂರಪ್ಪ ಅವರ ಬೃಹತ್ ಕಟೌಟ್‌ಗಳು ರಾರಾಜಿಸುತ್ತಿವೆ.
ಈ ಸಂದರ್ಭದಲ್ಲಿ ಆರೋಗ್ಯ ಸಚಿವ ಶ್ರೀರಾಮುಲು ಕಳೆದ 11 ವರ್ಷಗಳಿಂದ ಆಯೋಜಿಸುತ್ತ ಬಂದಿರುವ ಉಚಿತ ಸಾಮೂಹಿಕ ವಿವಾಹ ಸಮಾರಂಭವೂ ನಡೆಯಲಿದೆ. ಇಂದು ಒಟ್ಟು 650 ಜೋಡಿಗಳು ಹಸೆಮಣೆ ಏರಲಿದ್ದಾರೆ.