ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ದೊಡ್ಡಬಳ್ಳಾಪುರ: ಬಿಜೆಪಿ ಶಾಸಕ ನರಸಿಂಹ ಸ್ವಾಮಿ ರಾಜೀನಾಮೆ? (BJP | Narasimhaswamy | JDS | Congress | Jalappa)
Bookmark and Share Feedback Print
 
ಅಕ್ರಮ ಗಣಿಗಾರಿಕೆ, ವಿದ್ಯುತ್ ಕೊರತೆ, ನೆರೆ ಸಂತ್ರಸ್ತರ ಪರಿಹಾರ ವಿವಾದದ ಸುಳಿಯಲ್ಲಿ ಸಿಲುಕಿರುವ ಆಡಳಿತಾರೂಢ ಬಿಜೆಪಿ ಸರಕಾರಕ್ಕೆ ಮತ್ತೊಂದು ಕಂಟಕ ಎದುರಾಗಿದ್ದು, ದೊಡ್ಡಬಳ್ಳಾಪುರ ಕ್ಷೇತ್ರದ ಬಿಜೆಪಿ ಶಾಸಕ, ಕಾಂಗ್ರೆಸ್ ಮುಖಂಡ ಆರ್.ಎಲ್.ಜಾಲಪ್ಪ ಅವರ ಪುತ್ರ ಜೆ.ನರಸಿಂಹ ಸ್ವಾಮಿ ರಾಜೀನಾಮೆ ನೀಡುವ ಇಂಗಿತ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಳು ತಕ್ಷಣ ಲಭ್ಯವಾಗಲು ಟ್ವಿಟ್ಟರ್‌ನಲ್ಲಿ ನಮ್ಮನ್ನು ಫಾಲೋ ಮಾಡಿ

ವೈಯಕ್ತಿಕ ಕಾರಣಗಳಿಂದಾಗಿ ತಾನು ರಾಜೀನಾಮೆ ನೀಡಲು ನಿರ್ಧರಿಸಿರುವುದಾಗಿ ನರಸಿಂಹಸ್ವಾಮಿ ಹೇಳಿಕೆ ನೀಡಿದ್ದಾರೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬಳ್ಳಾರಿಯಿಂದ ವಾಪಸ್ ಆದ ಕೂಡಲೇ ಅವರ ಜತೆ ಚರ್ಚಿಸಿ ತಾನು ರಾಜೀನಾಮೆ ಸಲ್ಲಿಸುವುದಾಗಿ ಹೇಳಿದ್ದಾರೆ. ಅಲ್ಲದೇ ಈ ಸಂದರ್ಭದಲ್ಲಿ ಕೊಳಚೆ ನಿರ್ಮೂಲನಾ ಮಂಡಳಿ ಅಧ್ಯಕ್ಷ ಸ್ಥಾನಕ್ಕೂ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದಾರೆ.

ಕಾಂಗ್ರೆಸ್‌ನ ಭದ್ರಕೋಟೆಯಾಗಿದ್ದ ದೊಡ್ಡ ಬಳ್ಳಾಪುರದಲ್ಲಿ ಕಳೆದ ಉಪ ಚುನಾವಣೆಯ ಸಂದರ್ಭದಲ್ಲಿ ಜಾಲಪ್ಪ ಪುತ್ರರಾಗಿರುವ ಜೆ.ನರಸಿಂಹ ಸ್ವಾಮಿ ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರ್ಪಡೆಗೊಂಡು ಉಪ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಇದೀಗ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ನರಸಿಂಹಸ್ವಾಮಿ ನಿರ್ಧರಿಸಿರುವುದಾಗಿ ಹೇಳುವ ಮೂಲಕ ಬಿಜೆಪಿ ಒಳಗಿನ ಅಸಮಾಧಾನ ಹೊರಬಿದ್ದಂತಾಗಿದೆ.

ಅಕ್ರಮ ಗಣಿಗಾರಿಕೆ ವಿಚಾರದಲ್ಲಿ ತಮ್ಮ ತಂದೆ ಆರ್.ಎಲ್.ಜಾಲಪ್ಪ ಅವರ ಹೆಸರನ್ನು ಎಳೆದು ತಂದಿರುವುದಕ್ಕೆ ತಮಗೆ ಸಾಕಷ್ಟು ನೋವಾಗಿರುವುದಾಗಿ ನರಸಿಂಹಸ್ವಾಮಿ ಕೆಲವು ಆಪ್ತರಲ್ಲಿ ಹೇಳಿಕೊಂಡಿದ್ದಾರೆನ್ನಲಾಗಿದೆ. ಕೌಟುಂಬಿಕ ಕಾರಣಗಳಿಂದಾಗಿಯೇ ತಾನು ರಾಜೀನಾಮೆ ನೀಡುತ್ತಿರುವುದಾಗಿ ಸ್ವಾಮಿ ಸಮಜಾಯಿಷಿ ನೀಡಿದ್ದಾರೆ.

ಮತ್ತೊಂದೆಡೆ ಶಾಸಕ ನರಸಿಂಹಸ್ವಾಮಿ ಅವರು ಸಚಿವಸ್ಥಾನದ ಮೇಲೆ ಕಣ್ಣಿಟ್ಟಿದ್ದರು. ಅದಕ್ಕಾಗಿ ಸಾಕಷ್ಟು ಕಸರತ್ತು ನಡೆಸಿದ್ದರು. ಆದರೆ ಸಚಿವ ಸಂಪುಟದಲ್ಲಿ ಅವರಿಗೆ ಯಾವುದೇ ಸ್ಥಾನ ಸಿಗದಿರುವುದು ಕೂಡ ಅಸಮಾಧಾನಕ್ಕೆ ಕಾರಣ ಎನ್ನಲಾಗಿದೆ.

ರಾಜೀನಾಮೆ ವಿಷಯ ನನಗೆ ಗೊತ್ತಿಲ್ಲಾರಿ-ಜಾಲಪ್ಪ: 'ನನಗೇನೂ ಗೊತ್ತಿಲ್ಲಾರಿ...ಇದಕ್ಕೂ ನನಗೂ ಯಾವುದೇ ಸಂಬಂಧವಿಲ್ಲ...ಹೀಗೆಂದು ಪ್ರತಿಕ್ರಿಯೆ ನೀಡಿದವರು ಆರ್.ಎಲ್.ಜಾಲಪ್ಪ. ನಿಮ್ಮ ಪುತ್ರ ಶಾಸಕರ ಸ್ಥಾನಕ್ಕೆ ರಾಜೀನಾಮೆ ನೀಡುತ್ತಾರೆಂಬ ವದಂತಿ ಇದೆಯಲ್ಲ ಈ ಬಗ್ಗೆ ನೀವು ಏನು ಹೇಳುತ್ತೀರಿ ಎಂಬ ಮಾಧ್ಯಮದವರ ಪ್ರಶ್ನೆಗೆ ಅವರು ಈ ರೀತಿ ಉತ್ತರಿಸಿದ್ದಾರೆ.

ನನಗೂ, ಆತನ ರಾಜಕೀಯ ವ್ಯವಹಾರಕ್ಕೂ ಯಾವುದೇ ಸಂಬಂಧವಿಲ್ಲ. ಏನು ಮಾಡಬೇಕು, ಮಾಡಬಾರದು ಎಂಬ ನಿರ್ಧಾರ ಕೈಗೊಳ್ಳಲು ಅವರು ಸ್ವತಂತ್ರರು. ಆದರೆ ನನಗೂ ಅದಕ್ಕೂ ಯಾವುದೇ ಸಂಬಂಧವಿಲ್ಲ. ರಾಜೀನಾಮೆ ಕುರಿತಂತೆ ಯಾವುದೇ ಪ್ರತಿಕ್ರಿಯೆ ಇಲ್ಲ ಎಂದರು.

ನರಸಿಂಹ ಸ್ವಾಮಿ ಜೆಡಿಎಸ್‌ಗೆ ಸೇರ್ಪಡೆ?: ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿರುವ ನರಸಿಂಹ ಸ್ವಾಮಿ ಅವರು ಜೆಡಿಎಸ್ ಪಕ್ಷ ಸೇರ್ಪಡೆಗೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ. ಮತ್ತೊಂದೆಡೆ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಗೊಂಡಿರುವ ನರಸಿಂಹ ಸ್ವಾಮಿಯನ್ನು ಮತ್ತೆ ಕಾಂಗ್ರೆಸ್ ಪಕ್ಷಕ್ಕೆ ಸೇರಿಸಿಕೊಳ್ಳಲು ಸಿದ್ದರಾಮಯ್ಯ ಸೇರಿದಂತೆ ಹಲವು ಕಾಂಗ್ರೆಸ್ ಮುಖಂಡರು ತೆರೆಮರೆಯಲ್ಲಿ ಕಸರತ್ತು ನಡೆಸುತ್ತಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ