ತಾಲೂಕಿನ ಬೆಕ್ಕಳಲೆಯಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತ ಪರಮೇಶ್ ಕೊಲೆ ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್ ಪೊಲೀಸ್ ಇಲಾಖೆಯನ್ನು ಒತ್ತಾಯಿಸಿದ್ದಾರೆ.
ರಾಜಕೀಯ ಘರ್ಷಣೆಯಿಂದ ನಲುಗಿರುವ ಬೆಕ್ಕಳಲೆ ಗ್ರಾಮಕ್ಕೆ ಭೇಟಿ ನೀಡಿದ್ದ ಅವರು, ಕೊಲೆಯಾದ ಪರಮೇಶ್ ಕುಟುಂಬಕ್ಕೆ ಸಾಂತ್ವನ ಹೇಳಿದರು. ಬಳಿಕ ಮದ್ದೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಘರ್ಷಣೆಯ ಭಾಗಿಯಾಗಿದ್ದ ಕೆಲ ಆರೋಪಿಗಳ ಹೆಸರನ್ನು ಪೊಲೀಸರು ಪ್ರಥಮ ತನಿಖಾ ವರದಿಯಲ್ಲಿ ಕೈಬಿಟ್ಟಿರುವ ಬಗ್ಗೆ ಆರೋಪ ಕೇಳಿ ಬಂದಿದೆ. ತಪ್ಪಿತಸ್ಥರ ರಕ್ಷಣೆಗೆ ಮುಂದಾದಲ್ಲಿ ಕಾಂಗ್ರೆಸ್ ವತಿಯಿಂದ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಹಳ್ಳಿಗಳಲ್ಲಿ ಶಾಂತಿ ಕದಡುವ ಪ್ರಯತ್ನ ಸಲ್ಲದು. ಹಲ್ಲೆ, ಕೊಲೆ, ಆಸ್ತಿ-ಪಾಸ್ತಿ ನಾಶದಂತಹ ಪ್ರಕರಣ ಸಂಭವಿಸಿರುವುದು ಸರಿಯಲ್ಲ. ಪೊಲೀಸರು ಮುಂಜಾಗ್ರತಾ ಕ್ರಮ ಕೈಗೊಂಡು, ಮುಂದೆ ಯಾವುದೇ ಅನಾಹುತಕ್ಕೆ ಆಸ್ಪದವಿಲ್ಲದಂತೆ ಎಚ್ಚರವಹಿಸಬೇಕು ಎಂದರು.
ರಾಜಕೀಯ ದಳ್ಳುರಿಗೆ ಬಲಿಯಾದ ಕಾಂಗ್ರೆಸ್ ಕಾರ್ಯಕರ್ತ ಪರಮೇಶ್ ಕುಟುಂಬಕ್ಕೆ ಪ್ರದೇಶ ಕಾಂಗ್ರೆಸ್ ವತಿಯಿಂದ 1 ಲಕ್ಷ ರೂ. ಪರಿಹಾರ ನೀಡಲಾಗುವುದು ಎಂದು ಶಿವಕುಮಾರ್ ಘೋಷಿಸಿದರು.