ಗುಲ್ಬರ್ಗ ದಕ್ಷಿಣ ಹಾಗೂ ಕಡೂರು ಮರು ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ ಎಂಬ ವಿಶ್ವಾಸ ಇದೆ ಎಂದು ಬಿಜೆಪಿ ಹಿರಿಯ ಮುಖಂಡ, ಗ್ರಾಮೀಣಾಭಿವೃದ್ಧಿ ಸಚಿವ ಜಗದೀಶ ಶೆಟ್ಟರ್ ತಿಳಿಸಿದ್ದಾರೆ.
ಬಿಜೆಪಿ ಎರಡು ವರ್ಷಗಳ ಅಲ್ಪ ಅವಧಿಯಲ್ಲಿ ಮಾಡಿರುವ ಸಾಧನೆಯನ್ನು ಜನ ಗಮನಿಸಿದ್ದು, ಬಿಜೆಪಿಯನ್ನು ಬೆಂಬಲಿಸಲಿದ್ದಾರೆ. ಇತ್ತೀಚೆಗೆ ಗುಲ್ಬರ್ಗದಲ್ಲಿ ನಡೆದ ಬಿಜೆಪಿ ಸಮಾವೇಶವೇ ಸಾಕ್ಷಿ. ಬಿಜೆಪಿ ಶಿಸ್ತಿನ ಪಕ್ಷ. ಹೀಗಾಗಿ ಯಾರಿಗೆ ಟಿಕೆಟ್ ಸಿಕ್ಕರೂ ಎಲ್ಲರೂ ಒಟ್ಟಾಗಿ ಕೆಲಸ ಮಾಡ್ತಾರೆ. ಈ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಒಳ ಒಪ್ಪಂದ ಮಾಡಿಕೊಳ್ಳಲು ಮುಂದಾದರೆ ಅದನ್ನು ಎದುರಿಸಲು ಬಿಜೆಪಿ ಸಿದ್ಧವಾಗಿದೆ ಎಂದರು.
ಸಾಮಾಜಿಕ ಹಿನ್ನಲೆ, ಜನಸಾಮಾನ್ಯರೊಂದಿಗೆ ಸಂಪರ್ಕ, ಪಕ್ಷದಲ್ಲಿ ನಿಷ್ಠೆ ಇದ್ದವರಿಗೆ ಆದ್ಯತೆ ನೀಡಲಾಗುವುದು. ಒಟ್ಟಿನಲ್ಲಿ ಗೆಲ್ಲುವ ಅಭ್ಯರ್ಥಿಗೆ ಪ್ರಮುಖ ಆದ್ಯತೆ. ಅಂತಹ ಅಭ್ಯರ್ಥಿಯನ್ನೇ ಪಕ್ಷ ಆಯ್ಕೆ ಮಾಡಲಿದೆ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷ ಬಿಜೆಪಿ ಸರಕಾರದ ವಿರುದ್ಧ ಅಪಪ್ರಚಾರ ಮಾಡುತ್ತಿದೆ. ಪ್ರಮುಖ ಪ್ರತಿಪಕ್ಷವಾಗಿ ಕಾಂಗ್ರೆಸ್ ರಚನಾತ್ಮಕ ಕೆಲಸ ಮಾಡುತ್ತಿಲ್ಲ. ಈ ಚುನಾವಣೆಯಲ್ಲಿ ತಕ್ಕ ಉತ್ತರ ನೀಡಲಾಗುವುದು. ಮೂರ್ನಾಲ್ಕು ದಶಕಗಳಿಂದ ಅಧಿಕಾರದ ರುಚಿ ಕಂಡಿರುವ ಕಾಂಗ್ರೆಸ್‌ಗೆ ಅಧಿಕಾರದಿಂದ ಹೊರಗಿರುವುದು ಬಿಸಿ ತುಪ್ಪವಾಗಿದೆ. ಮಾತೆತ್ತಿದರೆ ರಾಜೀನಾಮೆ ಕೇಳುತ್ತಿದ್ದಾರೆ. ಆಡಳಿತ ಪಕ್ಷವಾಗಿರುವ ಬಿಜೆಪಿ ಎರಡು ವರ್ಷಗಳಲ್ಲಿ ಮಾಡಿರುವ ಸಾಧನೆ ಕುರಿತು ಜನರ ಬಳಿ ಹೇಳಿಕೊಳ್ಳಲು ಬಿಜೆಪಿ ಸಮಾವೇಶ ನಡೆಸಿದೆ. ಕಾಂಗ್ರೆಸ್ ಪಾದಯಾತ್ರೆಗೆ ಪರ್ಯಾಯವಾಗಿ ಈ ಸಮಾವೇಶ ನಡೆಸಲಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.