ಕಾಂಗ್ರೆಸ್‌ನ್ನು ಬೇರು ಸಹಿತ ಕಿತ್ತು ಹಾಕ್ತೇನೆ: ಸಿಎಂ ಶಪಥ
ಬಳ್ಳಾರಿ, ಶುಕ್ರವಾರ, 20 ಆಗಸ್ಟ್ 2010( 16:50 IST )
'ಕಾಂಗ್ರೆಸ್ ಪಕ್ಷವನ್ನು ರಾಜ್ಯದಲ್ಲಿ ಬೇರು ಸಹಿತ ಕಿತ್ತು ಹಾಕಲು ಸಂಕಲ್ಪ ತೊಟ್ಟಿದ್ದೇನೆ. ಅದಕ್ಕೆ ನೀವೆಲ್ಲರೂ ಕೂಡ ಸಂಕಲ್ಪ ತೊಡಬೇಕು' ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.
ಶುಕ್ರವಾರ ನಗರದಲ್ಲಿ ಆಯೋಜಿಸಿದ್ದ ಬಿಜೆಪಿಯ ಬೃಹತ್ ಜನಜಾಗೃತಿ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಕಾಂಗ್ರೆಸ್ ಪಕ್ಷಕ್ಕೆ ಅಭಿವೃದ್ದಿ ಬೇಕಾಗಿಲ್ಲ, ಅನಾವಶ್ಯಕ ಆಡಳಿತರೂಢ ಬಿಜೆಪಿ ಪಕ್ಷದ ವಿರುದ್ಧ ಟೀಕಿಸುವುದನ್ನೇ ದೊಡ್ಡ ಸಾಧನೆಯನ್ನಾಗಿ ಮಾಡಿಕೊಂಡಿದ್ದಾರೆ ಎಂದು ದೂರಿದರು.
ಇನ್ನು ಮುಂದಾದರು ಕಾಂಗ್ರೆಸ್ ಮುಖಂಡರು ಅಧಿಕಾರಕ್ಕಾಗಿ ಹೋರಾಟ ಮಾಡೋದನ್ನು ಬಿಟ್ಟು, ಅಭಿವೃದ್ಧಿಗಾಗಿ ಹೋರಾಟ ಮಾಡೋಣ ಬನ್ನಿ ಎಂದು ಪ್ರತಿಪಕ್ಷಗಳಿಗೆ ಮನವಿ ಮಾಡಿಕೊಂಡರು. ರಾಜ್ಯದಲ್ಲಿ ಒಳ್ಳೆಯ ಅಭಿವೃದ್ದಿ ಕೆಲಸ ಮಾಡಿದ್ದೇನೆ, ಅದನ್ನು ಸಹಿಸುವ ಶಕ್ತಿ ಕಾಂಗ್ರೆಸ್ ಮುಖಂಡರಿಗೆ ಇಲ್ಲ. ಕೇವಲ ತಮ್ಮ ಸ್ಥಾನ ಉಳಿಸಿಕೊಳ್ಳಲು ಪಾದಯಾತ್ರೆಯ ನಾಟಕ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಪ್ರತಿಪಕ್ಷವಾಗಿ ಪಾದಯಾತ್ರೆ, ಸಮಾವೇಶ, ಹೋರಾಟ ಮಾಡುವ ಹಕ್ಕು ಅವರಿಗಿದೆ. ಅದನ್ನು ನಾನು ಪ್ರಶ್ನಿಸುವುದಿಲ್ಲ. ಆದರೆ ಜವಾಬ್ದಾರಿಯುತ ಸ್ಥಾನದಲ್ಲಿರುವ ಕಾಂಗ್ರೆಸ್ ಮುಖಂಡರು ಸೊಂಟದ ಕೆಳಗಿನ ಮಾತನ್ನು ಉಪಯೋಗಿಸಿ, ಡ್ಯಾನ್ಸ್ ಮಾಡುತ್ತ, ದ್ವೇಷದ ರಾಜಕಾರಣ ಮಾಡುವುದಕ್ಕೆ ತನ್ನ ವಿರೋಧವಿದೆ ಎಂದರು.
ರಾಜ್ಯದಲ್ಲಿ ಕಳೆದ ಎರಡುವರೆ ವರ್ಷಗಳಲ್ಲಿ ಸಾಕಷ್ಟು ಅಭಿವೃದ್ಧಿ ಮಾಡಿದ್ದೇನೆ. ಹಾಗಾದರೆ ಕಳೆದ ಐವತ್ತು ವರ್ಷಗಳ ಕಾಲ ರಾಜ್ಯವನ್ನು ಆಳಿದ ಕಾಂಗ್ರೆಸ್ ಪಕ್ಷ ಎಷ್ಟು ಅಭಿವೃದ್ಧಿ ಮಾಡಿದೆ ಎಂದು ಪ್ರಶ್ನಿಸುತ್ತೇನೆ. ಭಾಗ್ಯಲಕ್ಷ್ಮಿ ಯೋಜನೆ, ವಿಧವಾ ವೇತನ, ನೆರೆ ಸಂತ್ರಸ್ತರಿಗೆ ಮನೆ ಸೇರಿದಂತೆ ಹತ್ತು ಹಲವು ಅಭಿವೃದ್ದಿ ಕಾರ್ಯ ಮಾಡಿದ್ದೇನೆ. ಕಾಂಗ್ರೆಸ್ಸಿಗರಿಗೆ ಇನ್ನೇನು ಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು. ಸ್ವಾತಂತ್ರ್ಯ ಬಂದಾಗಿನಿಂದಲೂ ಕಾಂಗ್ರೆಸ್ ಪಕ್ಷ ಮಾಡಿದ್ದಾದರು ಏನು ಎಂದು ಖಾರವಾಗಿ ಪ್ರಶ್ನಿಸಿದರು.
ಕಾಂಗ್ರೆಸ್‌ಗೆ ಭಯ ಶುರವಾಗಿದೆ-ಶ್ರೀರಾಮಲು: ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಕಾಂಗ್ರೆಸ್ ಮುಖಂಡರಿಗೆ ಭಯ ಪ್ರಾರಂಭವಾಗಿದೆ. ಮುಂದೆ ತಮಗೆ ಅಧಿಕಾರ ಬರುತ್ತೋ ಇಲ್ಲವೋ ಎಂಬ ಭಯದಿಂದ ಅಧಿವೇಶನ ನಡೆಯುವ ಸಂದರ್ಭದಲ್ಲಿ ರಾಜ್ಯದಲ್ಲಿನ ಸಮಸ್ಯೆಗಳ ಚರ್ಚೆ ನಡೆಸುವುದು ಬಿಟ್ಟು, ಗದ್ದಲ ನಡೆಸಿ ಪಾದಯಾತ್ರೆ ನಡೆಸಿದ್ದಾರೆ ಎಂದು ಆರೋಗ್ಯ ಸಚಿವ ಶ್ರೀರಾಮುಲು ಹೇಳಿದರು.
ಬೆಂಗಳೂರಿನಿಂದ ಬಳ್ಳಾರಿ ತನಕ ಕಾಂಗ್ರೆಸ್ ಪಾದಯಾತ್ರೆ ನಡೆಸಿದ್ದರಿಂದ ಕಾಂಗ್ರೆಸ್ ನಾಯಕರ ಬೊಜ್ಜು ಕರಗಿತು ಅಷ್ಟೇ ಎಂದು ಅವರು ಲೇವಡಿ ಮಾಡಿದರು. ನಾವು ಯಾವುದೇ ಅಕ್ರಮ ವ್ಯವಹಾರದಲ್ಲಿ ತೊಡಗಿಲ್ಲ. ಕಾಂಗ್ರೆಸ್ ನಾಯಕರು ಮೊದಲು ಅವರ ಪಕ್ಷದಲ್ಲಿದ್ದ ಗಣಿ ಕುಳಗಳನ್ನು ಮಟ್ಟ ಹಾಕಲಿ ಎಂದು ಸವಾಲು ಹಾಕಿದರು.
ಇಂದು ಬಳ್ಳಾರಿಯಲ್ಲಿ ನಡೆದ ಬೃಹತ್ ಜನಜಾಗೃತಿ ಸಮಾವೇಶದಲ್ಲಿ ಲೋಕಸಭೆ ಪ್ರತಿಪಕ್ಷ ನಾಯಕಿ ಸುಷ್ಮಾ ಸ್ವರಾಜ್, ಸಂಸದ ಅನಂತ್ ಕುಮಾರ್, ರಾಜ್ಯಸಭಾ ಸದಸ್ಯ ವೆಂಕಯ್ಯ ನಾಯ್ಡು, ಬಿಜೆಪಿ ರಾಜ್ಯಾಧ್ಯಕ್ಷ ಕೆ.ಎಸ್.ಈಶ್ವರಪ್ಪ, ಸಚಿವರಾದ ಜನಾರ್ದನ ರೆಡ್ಡಿ, ಕರುಣಾಕರ ರೆಡ್ಡಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.