ರೆಡ್ಡಿಗಳ ಸೆಳೆದು ಸರ್ಕಾರ ರಚನೆಗೆ ಕಾಂಗ್ರೆಸ್ ಸಂಚು: ಸುಷ್ಮಾ
ಬಳ್ಳಾರಿ, ಶುಕ್ರವಾರ, 20 ಆಗಸ್ಟ್ 2010( 20:36 IST )
PTI
ಐವತ್ತು ವರ್ಷಗಳಿಂದ ಕಾಂಗ್ರೆಸ್ ಆಡಳಿತಾವಧಿಯಲ್ಲಿ ಕಗ್ಗತ್ತಲ ತಾಣವಾಗಿದ್ದ ಬಳ್ಳಾರಿಯು ಅಭಿವೃದ್ಧಿಗೊಳ್ಳುವ ವೇಗವನ್ನು ಸಹಿಸಲಾರದ ಕಾಂಗ್ರೆಸ್ ಪಕ್ಷವು, ಬಳ್ಳಾರಿಯ ರೆಡ್ಡಿ ಸಹೋದರರನ್ನೇ ತಮ್ಮತ್ತ ಸೆಳೆದುಕೊಂಡು ಸರಕಾರ ಉರುಳಿಸಿ, ತಾವೇ ಸರಕಾರ ರಚಿಸುವ ಬಗ್ಗೆ ಎರಡು ಬಾರಿ ಪ್ರಯತ್ನಿಸಿತ್ತು ಎಂದು ಲೋಕಸಭೆಯ ಪ್ರತಿಪಕ್ಷ ನಾಯಕಿ, ಬಿಜೆಪಿ ಹಿರಿಯ ನೇತಾರೆ ಸುಷ್ಮಾ ಸ್ವರಾಜ್ ಅವರು ಆರೋಪಿಸಿದ್ದಾರೆ.
ಬಳ್ಳಾರಿಯಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ವಿರುದ್ಧ ಚುನಾವಣೆಗೆ ಸ್ಪರ್ಧಿಸಿ, ಸತತ 11ನೇ ವರ್ಷ ವರಮಹಾಲಕ್ಷ್ಮೀ ವ್ರತ ಆಚರಿಸಿದ ಬಳಿಕ, ಬಿಜೆಪಿ ಬೃಹತ್ ಸಮಾವೇಶದಲ್ಲಿ ಮಾತನಾಡಿದ ಸುಷ್ಮಾ, ಬಳ್ಳಾರಿ ಸಹೋದರರ ಬಿಜೆಪಿ ನಿಷ್ಠೆಯನ್ನು ಅಲುಗಾಡಿಸಲು ಒಂದಲ್ಲ, ಎರಡು ಬಾರಿ ಕಾಂಗ್ರಸ್ ಪ್ರಯತ್ನಿಸಿತು. ಅದು ಕೂಡ ಸಂವಿಧಾನಾತ್ಮಕವಾಗಿ ಅತ್ಯಂತ ಉನ್ನತ, ಜವಾಬ್ದಾರಿಯುತ ಹುದ್ದೆಯಲ್ಲಿರುವವರ ಮೂಲಕವೇ ಈ ಪ್ರಯತ್ನ ನಡೆಯಿತು. ಆದರೆ ರೆಡ್ಡಿ ಸಹೋದರರು ನಿಷ್ಠೆ ಬದಲಿಸದ ಕಾರಣದಿಂದ ಬೇಸತ್ತು, ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬರುವುದು ಅಸಾಧ್ಯ ಎಂಬುದು ಮನದಟ್ಟಾದ ಬಳಿಕ ಕಾಂಗ್ರೆಸ್ ಪಕ್ಷವು ಅಪಪ್ರಚಾರ, ಆತಂಕದ ವಾತಾವರಣ ಸೃಷ್ಟಿಸಲು ಪ್ರಯತ್ನಿಸಿತು. ಇದೇ ಕಾರಣಕ್ಕೆ ವಿಧಾನಮಂಡಲದಲ್ಲಿ ಗದ್ದಲ, ಧರಣಿ ಹಾಗೂ ಬೆಂಗಳೂರಿನಿಂದ ಬಳ್ಳಾರಿಗೆ ಅಪಪ್ರಚಾರದ ಪಾದಯಾತ್ರೆ ನಡೆಸಿತು ಎಂದು ನುಡಿದರು.
ಈ ರೀತಿಯಾಗಿ ರೆಡ್ಡಿಗಳನ್ನು ಬುಟ್ಟಿಗೆ ಹಾಕಿಕೊಳ್ಳಲು ಪ್ರಯತ್ನಿಸಿದ ಕಾಂಗ್ರೆಸ್ ಹಿರಿಯ ನೇತಾರ ಯಾರು ಎಂಬುದನ್ನು ನಾನೊಬ್ಬ ಜವಾಬ್ದಾರಿಯುತ ಹುದ್ದೆಯಲ್ಲಿರುವುದರಿಂದ ಇಲ್ಲಿ ಬಹಿರಂಗಪಡಿಸಲಾಗದು. ನೀವೇ ಕರೆದು ಕೇಳಿದರೆ ಅದನ್ನು ನಿಮ್ಮ ಮನೆ ಬಾಗಿಲಿಗೆ ಬಂದು ಹೇಳಲು ಸಿದ್ಧ ಎಂದು ಸುಷ್ಮಾ ಅವರು ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಗೆ ಸವಾಲು ಹಾಕಿದರು.
ಇಲ್ಲಿನ ಗಣಿ ಬಳ್ಳಾರಿ ಅಭಿವೃದ್ಧಿಗೆ...
PTI
ನಾವು ಹೆದರಿಸಿದರೆ ಹೆದರುವವರಲ್ಲ. ಪಾದಯಾತ್ರೆಗೆ ಹೆದರಿಲ್ಲ. ದಶಕಗಳ ಕಾಲದಿಂದ ನಡೆಯುತ್ತಿದ್ದ ಕಾಂಗ್ರೆಸಿಗರ ಅಕ್ರಮ ಗಣಿ ರಫ್ತುಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಯಡಿಯೂರಪ್ಪ ಅವರು ಗಣಿ ರಫ್ತು ನಿಷೇಧ ಮಾಡಿದ್ದಾರೆ. ಇದರಿಂದಾಗಿ ಈಗ ಕಾಂಗ್ರೆಸಿಗರು ಚಡಪಡಿಸುತ್ತಿದ್ದಾರೆ. ವರಮಹಾಲಕ್ಷ್ಮಿಯ ಕೃಪೆಯಿಂದ ಬಳ್ಳಾರಿಯ ಮಣ್ಣು ಈಗ ಬಂಗಾರವಾಗಿದೆ. ಈ ರಾಷ್ಟ್ರೀಯ ಸಂಪತ್ತು ಇಲ್ಲೇ ಬಳಕೆಯಾಗಿ, ಉಕ್ಕು ನಿರ್ಮಾಣ ಕಾರ್ಖಾನೆಗಳು ಬಂದು, ಲಕ್ಷಾಂತರ ಯುವಕರಿಗೆ ಉದ್ಯೋಗ ದೊರೆತು, ಅವರ ಮನೆಗಳಲ್ಲಿ ಹೊಸ ಬೆಳಕು ಮೂಡಬೇಕು, ಈ ಸಂಪತ್ತನ್ನು ಮುಖ್ಯಮಂತ್ರಿ ಯಡಿಯೂರಪ್ಪ ರಕ್ಷಿಸುತ್ತಿದ್ದಾರೆ ಎಂದರು ಸುಷ್ಮಾ.
ಅದಿರು ರಫ್ತು ನಿಷೇಧ ಕಾನೂನು ತನ್ನಿ, ಮೌಲ್ಯ ವರ್ಧನೆ ಮಾಡುವ ಕಾನೂನು ರೂಪಿಸಿ, ಅದಕ್ಕೆ ಯಾವುದೇ ಚರ್ಚೆ ಇಲ್ಲದೆ ನಾವು (ಬಿಜೆಪಿ) ಅವಿರೋಧ ಬೆಂಬಲ ನೀಡುತ್ತೇವೆ ಎಂದು ಈಗಾಗಲೇ ಕೇಂದ್ರದ ಗಣಿಗಾರಿಕೆ ಸಚಿವರಿಗೆ ಸಂಸತ್ತಿನಲ್ಲೇ ತಿಳಿಸಿದ್ದೇವೆ ಎಂದು ಸುಷ್ಮಾ ನೆನಪಿಸಿದರು.
ಬಳ್ಳಾರಿ ಭೇಟಿ ರಾಜಕೀಯಕ್ಕಲ್ಲ... ನಾನೇನೂ ಬಳ್ಳಾರಿಗೆ ಬರ್ತಾ ಇರೋದು ರಾಜಕೀಯ ಕಾರಣಕ್ಕಾಗಿ ಅಲ್ಲ, ಇಲ್ಲಿ ಚುನಾವಣೆಗೆ ಸ್ಪರ್ಧಿಸಲು ಕೂಡ ಅಲ್ಲ. ಕೊಟ್ಟ ಮಾತಿಗೆ ತಪ್ಪಲಾರೆ ಎಂಬ ಏಕೈಕ ಕಾರಣಕ್ಕೆ. ಗೆದ್ದರೂ ಸೋತರೂ ಪ್ರತಿವರ್ಷ ವರಲಕ್ಷ್ಮೀ ವ್ರತಕ್ಕೆ ಬರುತ್ತೇನೆ ಎಂದು ಬಳ್ಳಾರಿಗರಿಗೆ ಮಾತು ಕೊಟ್ಟಿದ್ದೆ. ಈ ಕಾರಣಕ್ಕಾಗಿಯೇ ಪ್ರತೀ ವರ್ಷ ಇಲ್ಲಿಗೆ ಬಂದು ಹೋಗುತ್ತಿದ್ದೇನೆ. ಈ 11 ವರ್ಷಗಳಲ್ಲಿ ಬಳ್ಳಾರಿ ಜನರೊಂದಿಗಿನ ಒಡನಾಟ ಆತ್ಮೀಯತೆಯಾಗಿ ಮಾರ್ಪಟ್ಟಿದೆ ಎಂದು ಸುಷ್ಮಾ ನುಡಿದರು.
ಎಂ.ಪಿ.ಪ್ರಕಾಶ್ ಟೀಕೆಗೆ ಉತ್ತರ ವರಲಕ್ಷ್ಮೀ ಪೂಜೆ ಹೆಸರಲ್ಲಿ ಬಳ್ಳಾರಿಗೆ ಬಂದು ಲಕ್ಷ್ಮೀಯನ್ನು ಕೊಂಡೊಯ್ಯುತ್ತಾರೆ ಎಂಬ ಕಾಂಗ್ರೆಸ್‌ನ ಎಂ.ಪಿ.ಪ್ರಕಾಶ್ ಟೀಕೆಗೆ ನೋವು ವ್ಯಕ್ತಪಡಿಸಿದ ಸುಷ್ಮಾ, ನನ್ನ ದಶಕಗಳ ರಾಜಕೀಯ ಜೀವನದಲ್ಲಿ ಎಂದಿಗೂ ಇಂತಹಾ ಅಸಹ್ಯ ಆರೋಪ ಕೇಳಿರಲಿಲ್ಲ. ಬಳ್ಳಾರಿಗೆ 11 ವರ್ಷಗಳಿಂದ ಬರುತ್ತಿದ್ದೇನೆ, ಇಲ್ಲಿಂದ 11 ರೂಪಾಯಿಯನ್ನೂ ಒಯ್ದಿಲ್ಲ ಎಂದು ಘಂಟಾಘೋಷವಾಗಿ ಸಾರುತ್ತೇನೆ ಎಂದ ಸುಷ್ಮಾ, 1999ರ ಲೋಕಸಭೆ ಚುನಾವಣೆಯಲ್ಲಿ ಬಳ್ಳಾರಿಯ ಅಭೇಧ್ಯವಾಗಿದ್ದ ಕಾಂಗ್ರೆಸ್ ಕೋಟೆಗೆ ಚಿಕ್ಕ ರಂಧ್ರವೊಂದನ್ನು ಮಾಡಿ ಹೋಗಿದ್ದೆ. ಅದನ್ನು ದೊಡ್ಡದಾಗಿಸಿ, ಇಡೀ ಕಾಂಗ್ರೆಸ್ ಕೋಟೆಯನ್ನು ರೆಡ್ಡಿ ಸಹೋದರರು ಪುಡಿಗಟ್ಟಿದ್ದಾರೆ. ನನ್ನ ಕೆಲಸ ಪೂರ್ಣಗೊಳಿಸಿರುವ ಅವರ ಬಗ್ಗೆ ನನಗೆ ಆದರ, ಅಭಿಮಾನ ಮತ್ತು ಆತ್ಮೀಯತೆಯಿದೆ. ಇದುವೇ ನಮ್ಮ ನಡುವಿನ ಆತ್ಮೀಯತೆಯ ಸಂಬಂಧ ಎಂದು ಸ್ಪಷ್ಟಪಡಿಸಿದರು.
ಪ್ರಧಾನಿಯಾಗೋದು ನೋಟಿನಿಂದ, ಓಟಿನಿಂದಲ್ಲ! ರೆಡ್ಡಿ ಸಹೋದರರು ಸುಷ್ಮಾರನ್ನು ಪ್ರಧಾನಿಯಾಗಿಸಲು 1000 ಕೋಟಿ ರೂಪಾಯಿ ಸೇರಿಸುತ್ತಿದ್ದಾರೆ ಎಂಬ ಕಾಂಗ್ರೆಸ್ ಮುಖಂಡ ಕೊಂಡಯ್ಯ ಟೀಕೆಗೂ ಉತ್ತರಿಸಿದ ಅವರು, "ಕೊಂಡಯ್ಯ ಅವರೇ, ಪ್ರಧಾನಿಯಾಗುವುದು ನೋಟುಗಳಿಂದಲ್ಲ, ಜನತೆಯ ಪ್ರೀತಿಯ ಓಟಿನಿಂದ. ನೋಟಿನಿಂದ ಪ್ರಧಾನಿ ಆಯ್ಕೆಯಾಗುತ್ತಿದ್ದರೆ ಟಾಟಾ, ಬಿರ್ಲಾ, ಅಂಬಾನಿ ಕೂಡ ಎಂದೋ ಪ್ರಧಾನಿಯಾಗುತ್ತಿದ್ದರು. ಅಟಲ್ ಬಿಹಾರಿ ವಾಜಪೇಯಿಯವರು ಜನರ ಪ್ರೀತಿಯ ಓಟಿನಿಂದಲೇ ಅಲ್ಲವೇ ಪ್ರಧಾನಿಯಾಗಿದ್ದು?" ಎಂದು ಪ್ರತ್ಯುತ್ತರ ನೀಡಿದರು.
ಬಳ್ಳಾರಿ ಜನ ಕಾಂಗ್ರೆಸ್ಸನ್ನೇ ಬಿಟ್ಟರು... 'ಬಳ್ಳಾರಿಗರೇ, ಬಿಜೆಪಿಯನ್ನು ಹೊಡೆದೋಡಿಸಿ' ಎಂಬ ಕಾಂಗ್ರೆಸ್ ಕರೆಯನ್ನು ಪ್ರಸ್ತಾಪಿಸಿದ ಸುಷ್ಮಾ, "ಕಾಂಗ್ರೆಸಿಗರೇ ಬನ್ನಿ, ಈಗ ಬಂದು ನೋಡಿ, ನೀವು ಹೇಳಿದ ಕರೆಗೆ ಬಳ್ಳಾರಿ ಜನತೆ ಓಗೊಟ್ಟರೇ? ಈ ರ‌್ಯಾಲಿಯನ್ನು ಬಂದು ನೋಡಿ, ಬಳ್ಳಾರಿ ಜನರು ಬಿಜೆಪಿಯನ್ನು ಬಿಟ್ಟರೇ ಅಥವಾ ಕಾಂಗ್ರೆಸ್ಸನ್ನೇ ಬಿಟ್ಟು ಬಿಜೆಪಿ ಜತೆಗೆ ಸೇರಿಕೊಂಡರೇ ಎಂಬುದು ನಿಮಗೆ ತಿಳಿಯುತ್ತದೆ. ನೀವು ನಡೆಸಿದ ರ‌್ಯಾಲಿಗಿಂತ ಹತ್ತು ಪಟ್ಟು ಹೆಚ್ಚು ಬಳ್ಳಾರಿ ಜನ ಸೇರಿದ್ದಾರೆ. ಬಳ್ಳಾರಿಯೀಗ ಬಿಜೆಪಿಮಯವಾಗಿದೆ. ಈ ವಿರಾಟ್ ರ‌್ಯಾಲಿಯನ್ನು ನೋಡಿದರೇ ನಿಮಗೆ ತಿಳಿಯುತ್ತದೆ. ಬಳ್ಳಾರಿ ಜನ ನಿಮ್ಮ ಕರೆಯನ್ನು ತಿರಸ್ಕರಿಸಿ ಹಿಂದೆಂದಿಂಗಿತಲೂ ಹೆಚ್ಚು ಪ್ರೀತಿಯಿಂದ ಅಪ್ಪಿಕೊಂಡಿದ್ದಾರೆ" ಎಂದರು.
ಆಂಧ್ರದಲ್ಲಿ ಬಿಜೆಪಿ ಪತಾಕೆ ಗುರಿ 2000ದಲ್ಲಿ ಬಂದಿದ್ದಾಗ, ಮಹಾಲಕ್ಷ್ಮಿಯಲ್ಲಿ ಆಶೀರ್ವಾದ ಕೋರಿ, ಹತ್ತು ವರ್ಷಗಳೊಳಗೆ ರಾಜ್ಯದಲ್ಲಿ ಬಿಜೆಪಿ ಸರಕಾರ ಬರುವಂತೆ ಮಾಡು ಅಂತ ಕೇಳಿದ್ದೆ. ದೇವಿ ವರ ನೀಡಿದ್ದಾಳೆ. ಹೀಗಾಗಿ ಈ ಬಾರಿ, 'ಬಳ್ಳಾರಿಯಿಂದ ನಮ್ಮನ್ನು ಬೆಂಗಳೂರಿಗೆ ತಲುಪಿಸಿದ್ದೀ. ಮುಂದಿನ ಹತ್ತು ವರ್ಷಗಳೊಳಗೆ ನಮ್ಮನ್ನು ಬಳ್ಳಾರಿಯಿಂದ ಹೈದರಾಬಾದ್‌ಗೆ ತಲುಪಿಸು ತಾಯೀ. ದಕ್ಷಿಣ ಭಾರತದ ಮತ್ತೊಂದು ರಾಜ್ಯ ಆಂಧ್ರಪ್ರದೇಶದಲ್ಲಿ ಬಿಜೆಪಿ ಸರಕಾರ ಬರುವಂತೆ ಅನುಗ್ರಹಿಸು ಅಂತ ಕೋರಿದ್ದೇನೆ. ಆಂಧ್ರದಲ್ಲಿ ಸರಕಾರ ರಚಿಸುವುದು ನಮ್ಮ ಮುಂದಿನ ಗುರಿ ಎನ್ನುತ್ತಾ ಸುಷ್ಮಾ ಭಾಷಣ ಮುಗಿಸಿದರು.