'ಬಳ್ಳಾರಿ ಜನರಿಗೆ ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು. ನೀವು ನನ್ನ ಮೇಲೆ ಇಟ್ಟಿರುವ ಪ್ರೀತಿ, ವಿಶ್ವಾಸಕ್ಕೆ ನಾನು ಅಭಿನಂದನೆ ಸಲ್ಲಿಸುತ್ತೇನೆ. ಅದೇ ರೀತಿ ನನ್ನ ತಮ್ಮ ಜನಾರ್ದನ ರೆಡ್ಡಿಗೂ ಈ ಸಂದರ್ಭದಲ್ಲಿ ಶುಭಾಶಯ ಹೇಳುತ್ತೇನೆ' ಇದು ಲೋಕಸಭೆ ವಿಪಕ್ಷ ನಾಯಕಿ ಸುಷ್ಮಾ ಸ್ವರಾಜ್ ಅವರು ಶುಕ್ರವಾರ ಕನ್ನಡದಲ್ಲಿ ಮಾತನಾಡಿ ನೆರೆದ ಜನಸ್ತೋಮದಿಂದ ಚಪ್ಪಾಳೆ ಗಿಟ್ಟಿಸಿಕೊಂಡರು.
ಇಂದು ನಗರದಲ್ಲಿ ಬಿಜೆಪಿಯ ಬೃಹತ್ ಜನಜಾಗೃತಿ ಸಮಾವೇಶದಲ್ಲಿ ಪಾಲ್ಗೊಂಡ ಅವರು ಮೊದಲಿಗೆ ಕನ್ನಡದಲ್ಲಿ ಮಾತು ಆರಂಭಿಸಿ ನಂತರ ಹಿಂದಿಯಲ್ಲಿ ಮಾತನಾಡಿದರು. ಕಳೆದ ಹತ್ತು ವರ್ಷಗಳಿಂದ ಬಳ್ಳಾರಿಯನ್ನು ಮರೆತಿದ್ದ ಕಾಂಗ್ರೆಸಿಗೆ ಇದೀಗ ದಿಢೀರ್ ಆಗಿ ನೆನಪು ಹೇಗೆ ಬಂತು ಎಂದು ಪ್ರಶ್ನಿಸಿದರು. ಬಳ್ಳಾರಿಯ ಅಭಿವೃದ್ದಿಯನ್ನು ಸಹಿಸದ ಕಾಂಗ್ರೆಸ್ ಮುಖಂಡರು ಹೊಟ್ಟೆಕಿಚ್ಚಿನಿಂದ ಟೀಕಿಸುತ್ತಿದ್ದಾರೆ ಎಂದು ಆರೋಪಿಸಿದರು.
ಕಾಂಗ್ರೆಸ್ ರ‌್ಯಾಲಿಗಿಂತ ಹಲವು ಪಟ್ಟು ಹೆಚ್ಚು ಜನ ಸೇರಿದ್ದೀರಿ. ಅದಕ್ಕಾಗಿ ನಾನು ಬಳ್ಳಾರಿ ಜನರನ್ನು ಅಭಿನಂದಿಸುತ್ತೇನೆ. ರಾಜ್ಯದಲ್ಲಿ ಬಿಜೆಪಿ ಅಧಿಕಾರದ ಗದ್ದುಗೆ ಹಿಡಿದಿರುವುದು ಮತ್ತು ಬಳ್ಳಾರಿಯಲ್ಲಿ ಕಾಂಗ್ರೆಸ್ ಪಕ್ಷ ನೆಲಕಚ್ಚಿರುವುದು ಕಾಂಗ್ರೆಸಿಗರಿಂದ ಜೀರ್ಣಿಸಿಕೊಳ್ಳಲು ಆಗುತ್ತಿಲ್ಲ ಎಂದು ವ್ಯಂಗ್ಯವಾಡಿದರು.
ಬಳ್ಳಾರಿ ಕಾಂಗ್ರೆಸ್ ಪಕ್ಷದ ಭದ್ರಕೋಟೆ ಎಂಬ ಅಹಂಕಾರ ಈಗ ನುಚ್ಚು ನೂರಾಗಿದೆ. ಅದರಿಂದಾಗಿ ಕಾಂಗ್ರೆಸಿಗರ ಹೊಟ್ಟೆಯಲ್ಲಿ ಸಂಕಟ, ತಳಮಳ ಆರಂಭವಾಗಿದೆ. ಹಾಗಾಗಿಯೇ ಕಾಂಗ್ರೆಸ್ ಮುಖಂಡರು ಬಳ್ಳಾರಿಯ ರೆಡ್ಡಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ ಎಂದರು.
ಯಡಿಯೂರಪ್ಪ ಸರಕಾರ ಪ್ರಗತಿಯ ಸುವರ್ಣಯುಗ ಕಳೆದ ಐವತ್ತು ವರ್ಷಗಳಿಂದ ಕಾಂಗ್ರೆಸ್ ಪಕ್ಷವೇ ಇಲ್ಲಿ ಆಡಳಿತ ನಡೆಸಿತ್ತು. ಆದರೆ ಅರ್ಧ ಶತಮಾನಗಳ ಕಾಲ ಬಳ್ಳಾರಿಯನ್ನು ಆಳಿದ ಕಾಂಗ್ರೆಸ್ ಏನು ನೀಡಿದೆ? ಹಸಿವು, ಕಗ್ಗತ್ತಲು, ಹೊಂಡಗಳಿಂದ ಕೂಡಿದ ರಸ್ತೆ, ಬಡತನ. ಅದಕ್ಕಾಗಿ ಬಳ್ಳಾರಿಗರು ಬಿಜೆಪಿಯನ್ನು ಧಿಕ್ಕರಿಸಿ ಕಾಂಗ್ರೆಸ್ ಪಕ್ಷವನ್ನು ನೀವು ಬೆಂಬಲಿಸಬೇಕಾ ಎಂದು ಸುಷ್ಮಾ ಪ್ರಶ್ನಿಸಿದರು.
ಈ ಐವತ್ತು ವರ್ಷಗಳಲ್ಲಿ ಎರಡೆತ್ತು, ಆಕಳು ಕರು, ಕೈ(ಚುನಾವಣಾ ಚಿಹ್ನೆಗಳು)ಗಳು ನಿಮ್ಮ ಕೈ ಹಿಡಿಯಲಿಲ್ಲ. ಸಾಂತ್ವನ ನೀಡಲು ಬರಲಿಲ್ಲ. ಎರಡೇ ವರ್ಷಗಳಲ್ಲಿ ಬಿಜೆಪಿ ಬಳ್ಳಾರಿಯನ್ನು ಅಭಿವೃದ್ಧಿ ಪಥದಲ್ಲಿ ತಂದು ನಿಲ್ಲಿಸಿದೆ. ಹಾಗಿದ್ದರೆ ಬಿಜೆಪಿಯನ್ನೇಕೆ ಬಳ್ಳಾರಿ ಬಿಡಬೇಕು? ಎಂದರು. ಯಡಿಯೂರಪ್ಪ ಸರಕಾರ ಬಂದ ಬಳಿಕ, ಪ್ರಗತಿಯ ಸುವರ್ಣ ಯುಗ ಆರಂಭವಾಗಿದೆ. ಮುರುಕು ಗಲ್ಲಿಗಳಿದ್ದಲ್ಲಿ, ಚತುಷ್ಪಥ ಹೆದ್ದಾರಿ ಬಂದಿದೆ. ಹಾಳು ಬಸ್ ನಿಲ್ದಾಣದ ಜಾಗದಲ್ಲಿ ವಿಮಾನ ನಿಲ್ದಾಣ ಬಂದಿದೆ. ಒಂಬತ್ತು ಸೂಪರ್ ಸ್ಪೆಶಾಲಿಟಿ ಆಸ್ಪತ್ರೆಗಳಿವೆ.
ಆ ನಿಟ್ಟಿನಲ್ಲಿ ಬಳ್ಳಾರಿ ಅಭಿವೃದ್ಧಿಗೆ ಕಂಕಣ ತೊಟ್ಟ ಜನಪ್ರಿಯ ಮುಖ್ಯಮಂತ್ರಿ ಯಡಿಯೂರಪ್ಪ, ರೆಡ್ಡಿ ಬಂಧುಗಳು, ಶ್ರೀರಾಮುಲು, ಬಳ್ಳಾರಿ ವಾಸಿಗಳ ಸೇವೆಯ ಸಂಕಲ್ಪ ಮಾಡಿರುವ ಎಲ್ಲರಿಗೂ ನನ್ನ ಅಭಿನಂದನೆಗಳು.
ಬಳ್ಳಾರಿಗೆ 1300 ಕೋಟಿ ರೂಪಾಯಿ ಯೋಜನೆ ಘೋಷಿಸಲಾಗಿದೆ. ಕಾರ್ಗತ್ತಲ ನಾಡಾಗಿದ್ದ ಬಳ್ಳಾರಿ ಅಭಿವೃದ್ಧಿಯಿಂದ ನಳನಳಿಸುತ್ತಿದೆ. ಎತ್ತಿನ ಗಾಡಿಯಲ್ಲಿ ಹೋಗುತ್ತಿದ್ದ ಬಳ್ಳಾರಿಗರು ಈಗ ಹೆಲಿಕಾಪ್ಟರ್, ವಿಮಾನಗಳಲ್ಲಿ ಸಂಚರಿಸಲು ಆರಂಭಿಸಿದ್ದಾರೆ ಎಂದು ಈ ಸಂದರ್ಭದಲ್ಲಿ ಹೇಳಿದರು.