ಕಾಂಗ್ರೆಸ್ ಮುಖಂಡರು ಮುಖ್ಯಮಂತ್ರಿಯಂತಹಾ ಉನ್ನತ ಸ್ಥಾನದಲ್ಲಿರುವವರ ಬಗ್ಗೆ ಗೌರವ ತೋರಿಸುವುದನ್ನು ಕಲಿಯಬೇಕು. ಮುಖ್ಯಮಂತ್ರಿಯನ್ನು ಏಕವಚನದಲ್ಲಿ ಕರೆಯುವುದನ್ನು ಬಿಡಬೇಕು. ಇನ್ನು ಮುಂದೆಂದಾದರೂ ಮುಖ್ಯಮಂತ್ರಿ ಯಡಿಯೂರಪ್ಪ ಬಗ್ಗೆ ಏಕವಚನದಲ್ಲಿ ಕೆಟ್ಟದಾಗಿ ಮಾತನಾಡಿದರೆ ನಾಲಿಗೆ ಕಿತ್ತು ಹಾಕುತ್ತೇವೆ ಎಂದು ಘರ್ಜಿಸಿದವರು ಬಿಜೆಪಿ ರಾಜ್ಯಾಧ್ಯಕ್ಷ, ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ.
ಬಳ್ಳಾರಿ ಮುನಿಸಿಪಲ್ ಕಾಲೇಜು ಮೈದಾನದಲ್ಲಿ ಶುಕ್ರವಾರ ನಡೆದ ಬಿಜೆಪಿಯ ಬೃಹತ್ ಜನಜಾಗೃತಿ ಸಮಾವೇಶದಲ್ಲಿ ಮಾತನಾಡುತ್ತಿದ್ದ ಅವರು, ನಮಗೂ ಕೆಟ್ಟದಾಗಿ ಮಾತನಾಡಲು ಗೊತ್ತಿದೆ. ಆದರೆ ನಾವು ಕೆಟ್ಟ ಭಾಷೆ ಬಳಸುವುದಿಲ್ಲ. ನಮ್ಮ ಪಕ್ಷವು ನಮಗೆ ಒಳ್ಳೆಯ ಸಂಸ್ಕಾರ ಹೇಳಿಕೊಟ್ಟಿದೆ. ಅಧಿಕಾರ ಸಿಗದ ಮತ್ತು ಸೋಲಿನ ಚಡಪಡಿಕೆಯಿಂದ ಕಾಂಗ್ರೆಸಿಗರು ಬಾಯಿಗೆ ಬಂದಂತೆ ಮಾತನಾಡುತ್ತಿವೆ ಎಂದು ಪ್ರತಿಪಕ್ಷಗಳ ವಿರುದ್ಧ ಕೆಂಡ ಕಾರಿದರು.
ಜನತಾ ದಳದಲ್ಲಿದ್ದಾಗ ಇದೇ ಸಿದ್ಧರಾಮಯ್ಯ ಮತ್ತು ಸಿ.ಎಂ. ಇಬ್ರಾಹಿಂ ಅವರು ಇಂದಿರಾ ಗಾಂಧಿಯನ್ನು ಮತ್ತು ಕಾಂಗ್ರೆಸ್ ಪಕ್ಷವನ್ನು ಅಸಭ್ಯವಾಗಿ, ಅಸಹ್ಯವಾಗಿ ನಿಂದಿಸಿದ್ದರು. ಆದರೆ ಈಗ? ಅವರೇ ಸೋನಿಯಾ ಗಾಂಧಿ ಫೋಟೋ ಇಟ್ಟುಕೊಂಡು ಪೂಜೆ ಮಾಡುತ್ತಿದ್ದಾರೆ ಎಂದು ಈಶ್ವರಪ್ಪ ಕುಟುಕಿದರು.
ಸಿದ್ಧರಾಮಯ್ಯ ಅವರಿಗೆ ಪಕ್ಷ ನಿಷ್ಠೆಯಿಲ್ಲ. ಜನತಾ ದಳದಲ್ಲಿರುವಾಗಲೇ ಅಹಿಂದ ಅಂತ ಕಟ್ಟಿಕೊಂಡು ಓಡಾಡಿದರು. ಅಲ್ಲಿಂದ ಓಡಿಸಿದ ಬಳಿಕ ಕಾಂಗ್ರೆಸಿಗೆ ಬಂದು, ಹಿಂದುಳಿದ ವರ್ಗದ ನಾಯಕ ಎನ್ನುತ್ತಾ ಸೋನಿಯಾ ಗಾಂಧಿಗೇ ಟೋಪಿ ಹಾಕಲು ಹೊರಟಿದ್ದಾರೆ. ಇದೀಗ ಪ್ರತಿಪಕ್ಷ ನಾಯಕನ ಸ್ಥಾನದಿಂದ ಕಿತ್ತು ಹಾಕಿದರೆ, ಅವರು ಸೋನಿಯಾರನ್ನೂ ನಿಂದಿಸಲು ಹಿಂಜರಿಯಲಾರರು ಎಂದು ಟೀಕಿಸಿದರು.