ಅಹಿಂಸೆಯಿಂದೇನೂ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿದ್ದಲ್ಲ: ಭೈರಪ್ಪ
ಮೈಸೂರು, ಶನಿವಾರ, 21 ಆಗಸ್ಟ್ 2010( 11:18 IST )
ಉಪವಾಸವು ಆತ್ಮಶುದ್ಧಿಗೆ ಕಾರಣವಾಗಬಹುದೇ ಹೊರತು, ಅಹಿಂಸೆ ಮತ್ತು ಉಪವಾಸದಿಂದಲೇ ಬ್ರಿಟಿಷರು ಭಾರತ ಬಿಟ್ಟು ಹೋದರೆಂಬ ವಾದವನ್ನು ಅಂದಿನ ಬ್ರಿಟಿಷ್ ಪ್ರಧಾನಿಯೂ ಸಂಪೂರ್ಣವಾಗಿ ಒಪ್ಪಿರಲಿಲ್ಲ ಎಂದು ಖ್ಯಾತ ಕಾದಂಬರಿಕಾರ ಎಸ್.ಎಲ್.ಭೈರಪ್ಪ ಹೇಳಿದರು.
ಮೈಸೂರಿನಲ್ಲಿ ಉಡುಪಿ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಯವರ 72ನೇ ಚಾತುರ್ಮಾಸ್ಯ ಸಮಾರಂಭದಲ್ಲಿ ಮಾತನಾಡುತ್ತಿದ್ದ ಅವರು, ದ್ವಿತೀಯ ಮಹಾಯುದ್ಧದ ಬಳಿಕ ಬ್ರಿಟಿಷರ ಶಕ್ತಿ ಕುಂದಿತ್ತು. ಅಲ್ಲದೆ ಭಾರತದಲ್ಲಿದ್ದ ಸೈನಿಕರು ಕೂಡ ಬ್ರಿಟಿಷರ ವಿರುದ್ದ ಕೆರಳಿದ್ದರು. ಅವರು ನಮ್ಮ ದೇಶವನ್ನು ಬಿಟ್ಟು ಹೋಗಲು ಇದುವೇ ಮುಖ್ಯ ಕಾರಣವಾಗಿತ್ತು ಎಂದರು.
ತಮ್ಮ ವಾದಕ್ಕೆ ಸಮರ್ಥನೆ ನೀಡುತ್ತಾ ಅವರು ಒಂದು ಪ್ರಸಂಗವನ್ನು ಉದಾಹರಿಸಿದರು. ಭಾರತವನ್ನು ತಮ್ಮ ಕಪಿಮುಷ್ಟಿಯಿಂದ ಮುಕ್ತರಾಗಿಸುವ ಸಂದರ್ಭ 'ಸ್ವಾತಂತ್ರ್ಯದಲ್ಲಿ ಅಹಿಂಸೆ ಎಷ್ಟರ ಮಟ್ಟಿಗೆ ಪರಿಣಾಮ ಬೀರಿತು' ಎಂಬ ಪತ್ರಕರ್ತರ ಪ್ರಶ್ನೆಗೆ ಅಂದಿನ ಬ್ರಿಟಿಷ್ ಪ್ರಧಾನಿ 'ಅತ್ಯಲ್ಪ ಮಾತ್ರ'ವೆಂದು ಉತ್ತರಿಸಿದರೆಂದು ಭೈರಪ್ಪ ತಿಳಿಸಿದರು.
ದೇಶವನ್ನು ಇಂದು ಜಾತಿ ರಾಜಕಾರಣವು ಒಡೆಯುತ್ತಿದೆ. ಪ್ರಥಮ ಚುನಾವಣೆಯಿಂದಲೇ ಈ ಜಾತಿ ರಾಜಕಾರಣ ನಡೆಯುತ್ತಿದೆ ಎಂದು ಹೇಳಿದ ಅವರು, ನಾವೆಲ್ಲರೂ ಜಾತಿ ನೋಡಿ, ಹಣ ಪಡೆದು ಓಟು ಹಾಕುವುದರಿಂದಾಗಿ ರಾಜಕಾರಣಿಗಳನ್ನು ನಿಯಂತ್ರಿಸುವುದು ಸಾಧ್ಯವಾಗುತ್ತಿಲ್ಲ ಎಂದು ವಿಷಾದಿಸಿದರು.