ಇಲ್ಲಿನ ಭಿಕ್ಷುಕರ ಪುನರ್ವಸತಿ ಕೇಂದ್ರದಲ್ಲಿ 23 ಮಂದಿಯ ನಿಗೂಢ ಸಾವಿನ ಹಿನ್ನೆಲೆಯಲ್ಲಿ ಸಮಾಜ ಕಲ್ಯಾಣ ಸಚಿವ ಡಿ.ಸುಧಾಕರ್ ಅವರಿಂದ ಖಾತೆಯನ್ನು ಕಿತ್ತುಕೊಳ್ಳಲಾಗಿದ್ದು, ಅದರ ಹೊಣೆಯನ್ನು ಕಿರು ನೀರಾವರಿ, ಅಂಕಿ ಅಂಶ ಮತ್ತು ಯೋಜನಾ ಖಾತೆ ಸಚಿವ ಗೋವಿಂದ ಕಾರಜೋಳ ಅವರಿಗೆ ಹೆಚ್ಚುವರಿಯಾಗಿ ವಹಿಸಲಾಗಿದೆ.
ಗೃಹ ಸಚಿವ ಡಾ.ವಿ.ಎಸ್.ಆಚಾರ್ಯ ಕೈಯಲ್ಲಿದ್ದ ಧಾರ್ಮಿಕ ದತ್ತಿ ಮತ್ತು ಮುಜರಾಯಿ ಖಾತೆಯನ್ನು ಸುಧಾಕರ್‌ಗೆ ವಹಿಸಲಾಗಿದೆ.
ಕೇಂದ್ರೀಯ ಪರಿಹಾರ ಸಮಿತಿ (ಸಿಆರ್‌ಸಿ)ಯಿಂದ ನಡೆಸಲ್ಪಡುತ್ತಿದ್ದ ಭಿಕ್ಷುಕರ ಪುನರ್ವಸತಿ ಕೇಂದ್ರದಲ್ಲಿ ಕಳೆದ ಒಂದು ವಾರದಿಂದ ನಿಗೂಢ ಕಾಯಿಲೆ ಕಾಣಿಸಿಕೊಂಡು, ಇದುವರೆಗೆ 23ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದರು. ಕರ್ನಾಟಕ ಅಭಿವೃದ್ಧಿ ಯೋಜನೆಯ ಆಡಳಿತಾಧಿಕಾರಿ ಎಸ್.ಸೆಲ್ವಕುಮಾರ್ ನೇತೃತ್ವದ ಸಮಿತಿಯೊಂನ್ನು ಸರಕಾರ ರಚಿಸಿದ್ದು, ಈ ಸಾವಿನ ತನಿಖೆಗೆ ಆದೇಶಿಸಿದೆ.
ಸಿಆರ್‌ಸಿ ಅಧ್ಯಕ್ಷ ಸಿ.ಮಂಜೇಗೌಡ ಅವರನ್ನು ಕೂಡ ಪದವಿಯಿಂದ ಕಿತ್ತುಹಾಕಲಾಗಿದ್ದು, ಸಿಆರ್‌ಸಿ ಕಾರ್ಯದರ್ಶಿ ಕೃಷ್ಣೇಗೌಡ ಅವರನ್ನು ವಿಚಾರಣೆಗಾಗಿ ಅಮಾನತಿನಲ್ಲಿಡಲಾಗಿದೆ.
ಖಾತೆಗಳ ಬದಲಾವಣೆಯ ಮುಖ್ಯಮಂತ್ರಿಗಳ ಪ್ರಸ್ತಾಪವನ್ನು ರಾಜ್ಯಪಾಲರು ಅಂಗೀಕರಿಸಿದ್ದಾರೆ.
ನಿಗೂಢ ಸಾವುಗಳ ಹಿನ್ನೆಲೆಯಲ್ಲಿ ಸುಧಾಕರ್ ರಾಜೀನಾಮೆ ನೀಡಬೇಕು ಎಂದು ಪ್ರತಿಪಕ್ಷಗಳು ಗದ್ದಲವೆಬ್ಬಿಸುತ್ತಿದ್ದವು. ಶನಿವಾರ ಭಿಕ್ಷುಕರ ಕಾಲನಿಗೆ ಭೇಟಿ ನೀಡಿ ಪರಿಸ್ಥಿತಿ ಪರಾಮರ್ಶಿವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ತಿಳಿಸಿದ್ದಾರೆ.