ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಭಿಕ್ಷುಕರ ಕೇಂದ್ರಕ್ಕೆ ಯಡಿಯೂರಪ್ಪ ಭೇಟಿ, ಘಟನೆಗೆ ವಿಷಾದ (BS Yedyurappa | Beggars Colony | Karnataka | BJP govt)
Bookmark and Share Feedback Print
 
ಸಮಾಜ ಕಲ್ಯಾಣ ಸಚಿವರಾಗಿದ್ದ ಡಿ. ಸುಧಾಕರ್ ಅವರನ್ನು ಎತ್ತಂಗಡಿ ಮಾಡಿದ ನಂತರ ಬೆಗ್ಗರ್ಸ್ ಕಾಲೊನಿಗೆ ಭೇಟಿ ನೀಡಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಆಗಿರುವ ಆವಾಂತರಕ್ಕೆ ವಿಷಾದಿಸಿದ್ದಾರೆ.

ಇಂದು ಬೆಳಿಗ್ಗೆ 9.30ರ ಹೊತ್ತಿಗೆ ಬೆಗ್ಗರ್ಸ್ ಕಾಲೊನಿಗೆ ಭೇಟಿ ನೀಡಿದ ಅವರು ಶೌಚಾಲಯ, ಆಹಾರ ಪೂರೈಕೆ ವ್ಯವಸ್ಥೆ, ಅದರ ಗುಣಮಟ್ಟ, ಭೋಜನಾಲಯ ಮುಂತಾದ ಎಲ್ಲಾ ವಿಭಾಗಗಳನ್ನೂ ಖುದ್ದಾಗಿ ಪರಿಶೀಲನೆ ನಡೆಸಿದರು.

ನಿರಾಶ್ರಿತರ ಕೇಂದ್ರದ ಪ್ರತಿಯೊಂದು ಕೊಠಡಿಗೂ ಪ್ರವೇಶಿಸಿ ಪರಿಶೀಲನೆ ನಡೆಸಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಯಡಿಯೂರಪ್ಪ, ಇಲ್ಲಿ ಕೊರತೆಗಳಿರುವುದು ಹೌದು; ಅವನ್ನೆಲ್ಲ ಶೀಘ್ರದಲ್ಲೇ ಸರಿಪಡಿಸಲಾಗುತ್ತದೆ. ಆಗಿರುವ ಆವಾಂತರಗಳಿಗೆ ಜನತೆಯಲ್ಲಿ ಕ್ಷಮೆ ಯಾಚಿಸುತ್ತೇನೆ. ಮುಂದೆ ಹೀಗಾಗದಂತೆ ನೋಡಿಕೊಳ್ಳುತ್ತೇನೆ ಎಂದರು.

ಈ ಭಿಕ್ಷುಕರ ಕೇಂದ್ರಕ್ಕೆ ನಾಲ್ಕು ವೈದ್ಯರು ಮತ್ತು 10 ದಾದಿಯರ ಅಗತ್ಯವಿದೆ. ಇತರ ವೈದ್ಯಕೀಯ ಸೌಲಭ್ಯಗಳೂ ಬೇಕಾಗಿದೆ. ಇಲ್ಲಿರುವ ಎಲ್ಲರನ್ನೂ ಒಂದೇ ಕಡೆ ಕೂಡಿ ಹಾಕುವ ಬದಲು ವರ್ಗೀಕರಿಸಬೇಕು. ಎಲ್ಲರಿಗೂ ಹೊಸ ಸಮವಸ್ತ್ರ, ಸ್ನಾನಗೃಹ ಮತ್ತು ಸುಸಜ್ಜಿತ ಶೌಚಾಲಯಗಳು ಸೇರಿದಂತೆ ಎಲ್ಲಾ ಸೌಲಭ್ಯಗಳನ್ನೂ ನೀಡುವ ಕುರಿತು ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಮುಖ್ಯಮಂತ್ರಿ ಭರವಸೆ ನೀಡಿದರು.

ಇಲ್ಲಿ ತುರ್ತು ಅಗತ್ಯವಿರುವ ಸವಲತ್ತುಗಳನ್ನು ಒದಗಿಸಲು ತಕ್ಷಣವೇ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟವರಿಗೆ ಈಗಲೇ ಆದೇಶ ನೀಡುತ್ತೇನೆ. ಸೇವಾ ವ್ಯವಸ್ಥೆಯಲ್ಲಿರುವ ಲೋಪಗಳನ್ನೂ ಸರಿಪಡಿಸಲಾಗುವುದು. ತಪ್ಪಿತಸ್ಥರು ಯಾರೇ ಆಗಿದ್ದರೂ, ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ. ಈ ಕುರಿತು ತನಿಖೆಗೆ ಈಗಾಗಲೇ ಆದೇಶ ನೀಡಿದ್ದೇನೆ ಎಂದರು.

ಭಿಕ್ಷುಕರ ಕೇಂದ್ರದಲ್ಲಿ ಕಳೆದ ಮೂರು ದಿನಗಳಿಂದ ಸಾವನ್ನಪ್ಪಿರುವವರ ಸಂಖ್ಯೆ 24ಕ್ಕೇರಿದ್ದು, ಈ ಕುರಿತು ತನಿಖೆ ನಡೆಸುವಂತೆ ಹಿರಿಯ ಐಎಎಸ್ ಅಧಿಕಾರಿ ಸೆಲ್ವ ಕುಮಾರ್ ಅವರಿಗೆ ಸೂಚನೆ ನೀಡಲಾಗಿದೆ. ಸಾವುಗಳಿಗೆ ಕಾರಣ ಏನು, ಕರ್ತವ್ಯ ಲೋಪ ಯಾರದ್ದು ಎಂಬ ಕುರಿತು ಅವರು ವರದಿ ಸಲ್ಲಿಸಿದ ನಂತರ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಯಡಿಯೂರಪ್ಪ ತಿಳಿಸಿದ್ದಾರೆ.

ಅದೇ ಹೊತ್ತಿಗೆ ಕೇಂದ್ರದಲ್ಲಿ ಅಕ್ರಮ ಚಟುವಟಿಕೆಗಳು ನಡೆಯುತ್ತಿವೆ ಎಂಬ ವರದಿಗಳನ್ನು ಮುಖ್ಯಮಂತ್ರಿಯವರು ತಳ್ಳಿ ಹಾಕಿದ್ದಾರೆ. ಅಂತಹ ಯಾವುದೇ ಚಟುವಟಿಕೆಗಳು ಇಲ್ಲಿ ನಡೆಯುತ್ತಿಲ್ಲ, ಅದು ಸುಳ್ಳು ಎಂದಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ