ಬೆಂಗಳೂರಿನ ನಿರಾಶ್ರಿತ ಶಿಬಿರದಲ್ಲಿ ನಡೆದ ಭಿಕ್ಷುಕರ ಸಾವಿಗೆ ಸರಕಾರವೇ ನೇರ ಹೊಣೆ ಎಂದು ವಿಧಾನಸಭೆ ಜೆಡಿಎಸ್ ಉಪ ನಾಯಕ ಬಂಡೆಪ್ಪ ಖಾಶಂಪೂರ ಆರೋಪಿಸಿದ್ದಾರೆ.
ಪುನರ್ವಸತಿ ಕೇಂದ್ರದ ಭಿಕ್ಷುಕರ ಆರೋಗ್ಯದ ಬಗ್ಗೆ ಸರಕಾರ ಕಾಳಜಿಯೇ ವಹಿಸಿಲ್ಲ. ಅವರಿಗೆ ಮೂಲ ಸೌಲಭ್ಯವೂ ಕೊಟ್ಟಿಲ್ಲ. ಒಂದು ಸಾವಿರ ಜನ ಇರಬಹುದಾದ ಇಲ್ಲಿ ಎರಡು ಸಾವಿರ ಜನರನ್ನು ಇಡಲಾಗಿದೆ. ಇವರ ಹೆಸರಿನಲ್ಲಿ ಕಲ್ಪಿಸಿದ ಅನುದಾನ ಯಾರ್ಯಾರದೋ ಜೇಬು ಸೇರಿದೆ. ಇದೆಲ್ಲ ಭಿಕ್ಷುಕರ ಸಾವಿಗೆ ಪ್ರಮುಖ ಕಾರಣವಾಗಿದೆ. ಈ ಬಗ್ಗೆ ಸರಕಾರ ಕೂಡಲೇ ಉನ್ನತ ಮಟ್ಟದ ತನಿಖೆಗೆ ಆದೇಶಿಸಬೇಕು ಎಂದು ಇಲ್ಲಿ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.
ಭಿಕ್ಷುಕರು ಎಂದಾಕ್ಷಣ ನಿರ್ಲಕ್ಷ್ಯದಿಂದ ನೋಡುವುದು ಸಲ್ಲದು. ಇವರ ವಿಷಯದಲ್ಲಿ ಸರಕಾರ ಮಾನವೀಯತೆ ಪ್ರದರ್ಶಿಸದಿರುವುದು ಖಂಡನೀಯ. ಭಿಕ್ಷುಕರ ಸಾವಿನ ಸಂಖ್ಯೆ ನಿತ್ಯವೂ ಹೆಚ್ಚುತ್ತಿದ್ದರೂ ಮುಖ್ಯಮಂತ್ರಿ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸುವ ಗೋಜಿಗೆ ಹೋಗಿಲ್ಲ. ಜನರ ಜೀವಕ್ಕಿಂತಲೂ ಇವರಿಗೆ ಸಾಧನೆ ಸಮಾವೇಶದಲ್ಲಿ ಭಾಗವಹಿಸುವುದೇ ಮುಖ್ಯವಾಗಿದೆ ಎಂದು ದೂರಿದರು.
ಭಿಕ್ಷುಕರ ಪುನರ್ವಸತಿ ಕೇಂದ್ರಗಳಿಗೆ ಕೇಂದ್ರ ಅಥವಾ ರಾಜ್ಯ ಸರಕಾರದಿಂದ ಯಾವುದೇ ಅನುದಾನ ಒದಗಿಸುತ್ತಿಲ್ಲ. ಸ್ಥಳೀಯ ಸಂಸ್ಥೆಗಳು ಭಿಕ್ಷುಕರ ಕರವೆಂದು ವಸೂಲಿ ಮಾಡಿ ಪಾವತಿಸುವ ಹಣದಲ್ಲೇ ಈ ಕೇಂದ್ರಗಳು ನಡೆಯುತ್ತಿವೆ. ಪ್ರಸಕ್ತ ವರ್ಷ 20 ಕೋಟಿ ರೂ. ನಿರೀಕ್ಷಿತ ಅನುದಾನ ಬರಲಿದ್ದು, 18 ಕೋಟಿ ರೂ. ಖರ್ಚು ಇದೆ. ಇಷ್ಟೆಲ್ಲ ಹಣ ಬರುತ್ತಿದ್ದರೂ ಈ ಕೇಂದ್ರಗಳಿಗೆ ಏನೂ ಸೌಲಭ್ಯಗಳಿಲ್ಲ ಎಂದು ಕಿಡಿ ಕಾರಿದರು.