ಕೋತಿ ಸಾಮಾನ್ಯವಾಗಿ ದೇವಸ್ಥಾನಕ್ಕೆ ಬಂದವರ ಕೈಲಿರುವ ಹಣ್ಣು ಹಂಪಲು ಕಿತ್ತುಕೊಳ್ಳುವುದು, ಅಂಗಡಿಗೆ ನುಗ್ಗಿ ಬ್ರೆಡ್ ಬಿಸ್ಕತ್ ಕದಿಯುವುದನ್ನು ಕಾಣುತ್ತೇವೆ. ಅಪರೂಪಕ್ಕೆ ಮನೆಗೂ ನುಗ್ಗುವ ಐನಾತಿ ಕೋತಿಗಳು ನಗರದಲ್ಲಿ ಕಾಣಸಿಗುತ್ತವೆ. ಆದರೆ ಇಲ್ಲೊಂದು ಕೋತಿ ಶುಕ್ರವಾರ ಬ್ಯೂಟಿ ಪಾರ್ಲರಿಗೇ ದಾಳಿಯಿಟ್ಟು ಬಿಟ್ಟಿದೆ. ಅಲ್ಲಿ ತೆರಳಿ ಮಾಡಬಾರದ ಅವಾಂತರವನ್ನು ಮಾಡಿದೆ. ಪಾರ್ಲರ್ ಒಳಗಿದ್ದ ಮಾನಿನಿಯರನ್ನು ಕೆಣಕಿ, ಛೇಡಿಸಿ ಅವರು ಕಿರುಚಾಡುವಂತೆಯೂ ಮಾಡಿ ಬಿಟ್ಟಿದೆ.
ಸಾಮಾನ್ಯವಾಗಿ ಈ ಕೋತಿ ಹಣ್ಣಿನ ಅಂಗಡಿಗಳಿಗೆ ದಾಳಿಯಿಡುವ ಕಾರ್ಯದಲ್ಲಿ ಮಾತ್ರ ನಿರತವಾಗಿತ್ತು. ಅದ್ಯಾಕೆ ಪಾರ್ಲರ್ ಒಳ ಹೋಗುವ ಮನಸ್ಸಾಯಿತೋ ಗೊತ್ತಿಲ್ಲ. ಸುಮಾರು ಹದಿನೈದು ದಿನಗಳಿಂದ ಪಟ್ಟಣದ ಮನೆಮನೆಗೂ ನುಗ್ಗುತ್ತಿದ್ದ ಈ ವಾನರ ಪಾರ್ಲರ್ ಒಳಗೇ ನುಗ್ಗಿ ಬಿಟ್ಟಿದ್ದ.
ಇಲ್ಲಿನ ನೃಪತುಂಗ ಮುಖ್ಯ ರಸ್ತೆಯಲ್ಲಿರುವ ಬ್ಯೂಟಿ ಪಾರ್ಲರಿಗೆ ನುಗ್ಗಿದ ಕೋತಿ ಕೆಲಕ್ಷಣ ಆತಂಕ ಸೃಷ್ಟಿಸಿತು. ಸ್ಟೈಲಾಗಿ ಬಂದು, ಸೌಂದರ್ಯವರ್ಧನೆಗೆ ಬಂದು ಕುಳಿತಿದ್ದ ಯುವತಿಯ ಭುಜವೇರಿತು. ಕೂದಲು ಹಿಡಿದು ಜಗ್ಗಾಡಿ, ಕಪಿಚೇಷ್ಟೆ ಮಾಡಿತು. ಏನು ಮಾಡಿದರೂ ಹೋಗದ ಕೋತಿಯನ್ನು ಓಡಿಸಲು ಹತ್ತಾರು ಜನ ಪ್ರಯಾಸ ಪಡಬೇಕಾಯಿತು.
ಪಟ್ಟಣದಲ್ಲಿ ಮಂಗಗಳ ಹಾವಳಿ ವಿಪರೀತವಾಗಿದೆ, ಸಹಿಸಲು ಆಗುತ್ತಿಲ್ಲ. ಇವನ್ನು ಕೂಡಲೇ ತೆರವುಗೊಳಿಸುವಂತೆ ನಾಗರಿಕರು ಆಗ್ರಹಿಸಿದ್ದಾರೆ.
ಈ ಹಿಂದೆಯೂ ಮಂಗಗಳ ಹಿಂಡು ಸಾರ್ವಜನಿಕರಿಗೆ ಸಾಕಷ್ಟು ತೊಂದರೆ ಕೊಟ್ಟಿತ್ತು. ಅವುಗಳನ್ನು ಹಿಡಿದು ಕಾಡಿಗೆ ಬಿಡಲಾಗಿತ್ತು. ಈಗ ಮತ್ತೆ ಅಂಥದೇ ತೊಂದರೆ ಎದುರಾಗಿದೆ.