ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಮುಖ್ಯಮಂತ್ರಿ ರಾಜೀನಾಮೆ ನೀಡಲಿ: ಎಚ್‌ಡಿಕೆ, ಬಂಗಾರಪ್ಪ (HD Kumaraswamy | BS Yedyurappa | S Bangarappa | Beggars colony)
Bookmark and Share Feedback Print
 
ಬೆಗ್ಗರ್ಸ್ ಕಾಲೊನಿಯಲ್ಲಿ 24ಕ್ಕೂ ಹೆಚ್ಚು ಭಿಕ್ಷುಕರು ಸಾವನ್ನಪ್ಪಿರುವುದಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡುವಂತೆ ಮಾಜಿ ಮುಖ್ಯಮಂತ್ರಿಗಳಾದ ಎಚ್.ಡಿ. ಕುಮಾರಸ್ವಾಮಿ ಮತ್ತು ಎಸ್. ಬಂಗಾರಪ್ಪ ಅವರು ಆಗ್ರಹಿಸಿದ್ದಾರೆ.

ಈ ಸಂಬಂಧ ಇಂದು ರಾಜ್ಯಪಾಲರನ್ನು ಭೇಟಿಯಾಗಿ ಘಟನೆ ಕುರಿತು ಕಳವಳ ವ್ಯಕ್ತಪಡಿಸಿದ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ, ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಎಂಟು ತಿಂಗಳ ಹಿಂದೆ ಇಲ್ಲಿಗೆ ಸ್ವತಃ ಮುಖ್ಯಮಂತ್ರಿಯವರು ಭೇಟಿ ನೀಡಿದ್ದರೂ, ಅವರು ಯಾವುದೇ ಕ್ರಮವನ್ನು ಕೈಗೊಳ್ಳದೇ ಇರುವ ಮೂಲಕ ಘಟನೆಗೆ ನೇರ ಕಾರಣರಾಗಿದ್ದಾರೆ. ಈ ನಡೆದಿರುವ ಆವಾಂತರಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪನವರೇ ನೇರ ಹೊಣೆ ಎಂದು ಜೆಡಿಎಸ್ ಸಂಸದ ಕಿಡಿ ಕಾರಿದ್ದಾರೆ.

ಈ ಸರಕಾರಕ್ಕೆ, ಬಿಜೆಪಿ ನಾಯಕರಿಗೆ ಮಾನ, ಮರ್ಯಾದೆ ಏನಾದರೂ ಇದೆಯೇ ಎಂದು ಪ್ರಶ್ನಿಸಿರುವ ಕುಮಾರಸ್ವಾಮಿ, ನಿರಾಶ್ರಿತರ ಕೇಂದ್ರದಲ್ಲಿ 24 ಮಂದಿ ಸತ್ತರೂ ಅವರು ಸುಷ್ಮಾ ಸ್ವರಾಜ್ ಜತೆ ಸಮಾವೇಶ ನಡೆಸುತ್ತಾರೆ. ಇವರಿಗೆ ಮಾನವೀಯತೆ, ಮನುಷ್ಯತ್ವ ಎಂಬುದು ಏನೆಂದು ತಿಳಿದಿದೆಯೇ. ಈ ರಾಜ್ಯದಲ್ಲಿ ಸರಕಾರ ಎಂಬುದು ಇದೆ ಎಂಬುದೇ ಅರಿವಿಗೆ ಬರುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಘಟನೆ ನಡೆಯುತ್ತಿದ್ದಂತೆ ಸಮಾಜ ಕಲ್ಯಾಣ ಸಚಿವರಾಗಿದ್ದ ಡಿ. ಸುಧಾಕರ್ ಅವರನ್ನು ಮುಜರಾಯಿ ಖಾತೆಗೆ ವರ್ಗಾಯಿಸಿರುವುದನ್ನು ಉಲ್ಲೇಖಿಸಿದ ಅವರು, ಕೇವಲ ಸಚಿವರ ಖಾತೆ ಬದಲಾಣೆಗೆ ಇದು ಸೀಮಿತವಲ್ಲ. ಬೇಜವಾಬ್ದಾರಿಯನ್ನು ಬಿಟ್ಟು, ಜವಾಬ್ದಾರಿಯಿಂದ ಸಮಸ್ಯೆ ಬಗೆಹರಿಸಲು ಯತ್ನಿಸಲಿ ಎಂದು ಸಲಹೆ ನೀಡಿದರು.

ಸರಕಾರಕ್ಕೆ ಸಾಧನಾ ಸಮಾವೇಶವೇ ಮುಖ್ಯ ಹೊರತು ಜನರ ಹಿತವಲ್ಲ. ಇಷ್ಟೊಂದು ಮಂದಿ ಸಾವನ್ನಪ್ಪಿದ್ದರೂ ಮುಖ್ಯಮಂತ್ರಿಯವರು ಇನ್ನೂ ಉಡಾಫೆಯ ಹೇಳಿಕೆ ನೀಡುತ್ತಿದ್ದಾರೆ. ಅವರ ಕಲ್ಯಾಣಕ್ಕೆ ಅಗತ್ಯ ಕ್ರಮ ಕೈಗೊಳ್ಳಲಿ ಎಂದು ಕುಮಾರಸ್ವಾಮಿ ಎಂದರು.

ನ್ಯಾಯಾಂಗ ತನಿಖೆ ನಡೆಯಲಿ...
ನಿರಾಶ್ರಿತರ ಕೇಂದ್ರದಲ್ಲಿ ಹಲವು ಮಂದಿ ಸಾವನ್ನಪ್ಪಿರುವ ವಿಚಾರ ಗಂಭೀರವಾದದ್ದು. ಆದರೆ ಇದನ್ನು ಮುಚ್ಚಿ ಹಾಕುವ ಯತ್ನ ಇಲಾಖೆಗಳಿಂದ ನಡೆಯುತ್ತಿರುವುದು ಸ್ಪಷ್ಟವಾಗಿದೆ. ಹಾಗಾಗಿ ಇದನ್ನು ನ್ಯಾಯಾಂಗ ತನಿಖೆಗೆ ಒಳಪಡಿಸಬೇಕು ಎಂದು ಬಂಗಾರಪ್ಪ ಒತ್ತಾಯಿಸಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡುತ್ತಿದ್ದ ಅವರು, ನಿರ್ವಸಿತರ ಕೇಂದ್ರದಲ್ಲೇ ಭಿಕ್ಷುಕರು ಸಾವನ್ನಪ್ಪುತ್ತಿರುವುದು ಆತಂಕಕಾರಿ ಮತ್ತು ತಲೆ ತಗ್ಗಿಸಬೇಕಾದ ವಿಚಾರ. ಇದರ ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ಯಡಿಯೂರಪ್ಪ ರಾಜೀನಾಮೆ ನೀಡಲಿ. ಇಂತಹ ಘೋರ ಅನ್ಯಾಯ ನಡೆಯುತ್ತಿದ್ದರೂ ಅವರು ಅಧಿಕಾರದಲ್ಲಿ ಮುಂದುವರಿಯುವದರಲ್ಲಿ ಅರ್ಥವಿಲ್ಲ ಎಂದರು.
ಸಂಬಂಧಿತ ಮಾಹಿತಿ ಹುಡುಕಿ