ತಮಿಳುನಾಡು ಸರ್ಕಾರ ಅಕ್ರಮವಾಗಿ ಕೈಗೊಂಡಿರುವ ಹೊಗೇನಕಲ್ ಯೋಜನೆಯನ್ನು ಕೈಬಿಡಲು ಒತ್ತಾಯಿಸಿ ಕನ್ನಡ ಪರ ಸಂಘಟನೆಗಳೆಲ್ಲಾ ಸೇರಿ ಸೆಪ್ಟೆಂಬರ್ 11ರಂದು ಹೊಗೇನಕಲಿ ವಿರೋಧಿ ಸಮ್ಮೇಳನ ನಡೆಸಲಿದ್ದೇವೆ ಎಂದು ಕನ್ನಡ ಚಳುವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಹೇಳಿದ್ದಾರೆ.
ಜೊತೆಗೆ, ತಮಿಳುನಾಡು ಸರ್ಕಾರ ಈ ಹೊಗೇನಕಲ್ ಯೋಜನೆಯನ್ನು ಕೈಬಿಡದಿದ್ದರೆ, ಇದೇ 23ರಂದು ಸೋಮವಾರ ಬೆಳಿಗ್ಗೆ ಚಾಮರಾಜನಗರದ ಜಿಲ್ಲಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಲಾಗುವುದು ಎಂದೂ ಎಚ್ಚರಿಸಿದರು.
ರಾಜ್ಯ ಸರ್ಕಾರ ಕೂಡಲೇ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲು ಸರ್ವ ಪಕ್ಷ ನಿಯೋಗವನ್ನು ದೆಹಲಿಗೆ ಕೊಂಡೊಯ್ಯಬೇಕು ಎಂದೂ ಅವರು ಇದೇ ಸಂದರ್ಭ ಒತ್ತಾಯಿಸಿದರು.
ಕನ್ನಡದ ಉಳಿವಿಗಾಗಿ ಮತ್ತು ಬೆಳವಣಿಗೆಗಾಗಿ ಶ್ರಮಿಸುತ್ತಿರುವ ಕನ್ನಡ ಪರ ಹೋರಾಟಗಾರರ ಬಗ್ಗೆ ಸರ್ಕಾರಕ್ಕೆ ಕಿಂಚಿತ್ತೂ ಕಾಳಜಿಯೇ ಇಲ್ಲ ಎಂದೂ ಅವರು ಇದೇ ಸಂದರ್ಭ ಕಿಡಿ ಕಾರಿದರು.