ರಾಜ್ಯದಲ್ಲಿ ಮಳೆ ಮತ್ತೆ ತನ್ನ ಪ್ರತಾಪ ತೋರಲು ಆರಭಿಸಿದೆ. ಬಳ್ಳಾರಿ, ಚಿಕ್ಕಮಗಳೂರು, ಶಿವಮೊಗ್ಗ, ಹಾಸನ, ದಾವಣಗೆರೆ ಸೇರಿದಂತೆ ಹಲವಾರು ಜಿಲ್ಲೆಗಳಲ್ಲಿ ಶುಕ್ರವಾರ ರಾತ್ರಿಯಿಂದೀಚೆಗೆ ಎಡೆಬಿಡದೆ ಮಳೆ ಸುರಿಯುತ್ತಿದ್ದು ಮೂವರು ಸಾವನ್ನಪ್ಪಿದ್ದಾರೆ. ಭಾರೀ ಮಳೆಗೆ ಅಪಾರ ಪ್ರಮಾಣದ ಆಸ್ತಿ ಪಾಸ್ತಿ ನಷ್ಟವಾಗಿದೆ.
ನಗರದ ರಿಚ್ಮಂಡ್ ವೃತ್ತದ ಬಳಿ ಭಾರೀ ಮಳೆಗೆ ಮರ ಉರುಳಿ ಆಟೋ ಚಾಲಕನೊಬ್ಬ ಮೃತಪಟ್ಟ ಘಟನೆ ನಡೆದಿದೆ. ಹೊಸನಗರದ ಬಳಿಯ ರಾಗಿ ಗುಡ್ಡದಲ್ಲಿ ಮನೆ ಗೋಡೆ ಕುಸಿದು ವ್ಯಕ್ತಿ ಬಲಿಯಾದರೆ, ಬಳ್ಳಾರಿಯ ಅಂಕಮನಾಳ ಗ್ರಾಮದಲ್ಲಿ ನೀರಾವರಿ ಕೆರೆ ಒಡೆದ ಪರಿಣಾಮ ಪ್ರವಾಹಕ್ಕೆ ಕೊಚ್ಚಿಹೋಗಿ ಮೃತಪಟ್ಟಿದ್ದಾರೆ.
ಹಾಸನ ಜಿಲ್ಲೆಯಲ್ಲಿ 25ಕ್ಕೂ ಹೆಚ್ಚು ಮನೆಗಳಿಗೆ ಮಳೆಯಿಂದ ಹಾನಿಯಾಗಿ ಜಖಂಗೊಂಡರೆ, ದಾವಣಗೆರೆ ಜಿಲ್ಲೆಯಲ್ಲಿ 30ಕ್ಕೂ ಹೆಚ್ಚು ಮನೆಗಳು ಕುಸಿದು ಬಿದ್ದಿವೆ. ಲಿಂಗನಮಕ್ಕಿ ಅಣೆಕಟ್ಟು, ಭದ್ರಾ ಜಲಾಶಯದಲ್ಲೂ ನೀರಿನ ಮಟ್ಟ ಕ್ಷಣಕ್ಷಣಕ್ಕೂ ಏರುತ್ತಿದ್ದು, ನದೀ ಪಾತ್ರದ ಜನತೆಗೆ ಸುರಕ್ಷಿತ ಸ್ಥಳಗಳಿಗೆ ತೆರಳಲು ಸೂಚನೆ ನೀಡಲಾಗಿದೆ. ಮೀನುಗಾರರಿಗೂ ನೀರಿಗಿಳಿಯದಂತೆ ಎಚ್ಚರಿಕೆ ನೀಡಲಾಗಿದೆ.
ಚಿಕ್ಕಮಗಳೂರು ಜಿಲ್ಲೆಯ ಬಾಬಾಬುಡನ್ ಗಿರಿ ಮಾರ್ಗದಲ್ಲೂ ಬೃಹತ್ ಗಾತ್ರದ ಬಂಡೆಗಳು ರಸ್ತೆಗುರುಳಿ ಸಂಚಾರ ಅಸ್ತವ್ಯಸ್ತವಾಗಿವೆ. ಪ್ರವಾಸಿ ತಾಣ ಕೆಮ್ಮಣ್ಣುಗುಂಡಿಯಲ್ಲೂ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ತರೀಕೆರೆ ತಾಲೂಕಿನಲ್ಲಿ ಮಳೆಯ ಪ್ರವಾಹಕ್ಕೆ ಜಾನುವಾರುಗಳು ಕೊಚ್ಚಿಕೊಂಡು ಹೋಗಿವೆ. ಕೊಡಗು ಜಿಲ್ಲೆಯಲ್ಲೂ ಭಾರೀ ಮಳೆಯಾಗುತ್ತಿದ್ದು, ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ನೀರಿನ ಮಟ್ಟ ದಿಢೀರ್ ಏರಿಕೆಯಾಗಿದೆ.
ಬಳ್ಳಾರಿಯಲ್ಲೂ ಭಾರೀ ಮಳೆಯಾಗುತ್ತಿದೆ. ಸಂಡೂರು ಹಾಗೂ ಕೂಡ್ಲಿಗಿ ತಾಲೂಕಿನಾದ್ಯಂತ ಶುಕ್ರವಾರದಿಂದಲೂ ಮಳೆ ಸುರಿಯುತ್ತಿದ್ದು, ಇದರಿಂದ ಅಂಕಮನಾಳು ಗ್ರಾಮದ 1500 ಎಕರೆ ವ್ಯಾಪ್ತಿಯ ನೀರಾವರಿ ಕೆರೆ ಭರ್ತಿಯಾಗಿ ಪ್ರವಾಹೋಪಾದಿಯಲ್ಲಿ ನೀರು ಹರಿಯಲು ಆರಂಭಿಸಿದೆ. ಪ್ರವಾಹದಲ್ಲಿ ಗೋನಾಳ್ ಬಸವರಾಜ್ (28) ಅವರು ಸಾವನ್ನಪ್ಪಿದ್ದರೆ, ಕೆಲ ಮಂದಿಯ್ನನು ಹೆಲಿಕಾಪ್ಟರ್ ಮೂಲಕ ರಕ್ಷಿಸಲಾಗಿದೆ.