ರಾಜ್ಯದಲ್ಲಿ ಹೊಸದಾಗಿ ಗಣಿಗಾರಿಕೆಗೆ ಮತ್ತು ಅಕ್ರಮ ಗಣಿಗಾರಿಕೆಗೆ ಪರವಾನಗಿ ನೀಡಿದ್ದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ನೇತೃತ್ವದ ಬಿಜೆಪಿ ಸರಕಾರ ಎಂದು ಮಾಜಿ ಮುಖ್ಯಮಂತ್ರಿ ಎನ್.ಧರಂಸಿಂಗ್ ಆರೋಪಿಸಿದ್ದಾರೆ.
ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರಕಾರವಿದ್ದಾಗ ಉಪ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ಕೇಂದ್ರ ಸರಕಾರದ ಅನುಮತಿ ಪಡೆಯದೆ ಗಣಿಗಾರಿಕೆಗೆ ಪರವಾನಗಿ ನೀಡಿದ್ದಾರೆ ಎಂದು ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದರು. ತಾವು ಮುಖ್ಯಮಂತ್ರಿಯಾಗಿದ್ದಾಗ ಹೊಸದಾಗಿ ಗಣಿಗಾರಿಕೆ ನಡೆಸಲು ಅವಕಾಶ ನೀಡಲಿಲ್ಲ ಎಂದು ಸ್ಪಷ್ಟಪಡಿಸಿದರು.
ಬಳ್ಳಾರಿ, ಚಿತ್ರದುರ್ಗ ಜಿಲ್ಲೆಗಳಲ್ಲಿ ಗಣಿಗಾರಿಕೆ ಮಾಡಿ ಅದಿರನ್ನು ರೈತರ ಭೂಮಿಯಲ್ಲಿ ಸಂಗ್ರಹಿಸಿದ್ದರಿಂದ ಕೃಷಿ ಚಟುವಟಿಕೆಗಳಿಗೆ ತೊಂದರೆಯಾಗುತ್ತಿದ್ದು, ಅದಿರು ಸಾಗಿಸಲು ಕ್ರಮ ಕೈಗೊಳ್ಳಿ ಎಂದು ರೈತರು ಮನವಿ ಮಾಡಿದ್ದರಿಂದ, ಮುಖ್ಯಮಂತ್ರಿ ಆಗಿದ್ದ ನಾನು ಗಣಿ ಮಾಲೀಕರಿಗೆ ದಂಡ ವಿಧಿಸಿ, ಬೊಕ್ಕಸಕ್ಕೆ ರಾಯಲ್ಟಿ ಸಂಗ್ರಹಿಸಿದ್ದೆ ಎಂದರು.
ಅದಾದ ಕೆಲ ದಿನಗಳಲ್ಲಿಯೇ ಸರಕಾರ ಉರುಳಿತು, ಬೆನ್ನಲ್ಲಿಯೇ ಉಪಮುಖ್ಯಮಂತ್ರಿಯಾದ ಯಡಿಯೂರಪ್ಪನವರು, ಕೇಂದ್ರದ ಅನುಮತಿ ಪಡೆಯದೆ, ಅಕ್ರಮ ಗಣಿಗಾರಿಕೆಗೆ ಅನುಮತಿ ನೀಡಿದರು ಎಂದು ದೂರಿದರು. ಆದರೆ ತನ್ನ ಅಧಿಕಾರಾವಧಿಯಲ್ಲಿ ಯಾವುದೇ ಗಣಿಗಾರಿಕೆಗೆ ಅನುಮತಿ ನೀಡಿಲ್ಲ ಎಂದು ಹೇಳಿದರು.
ಲೋಕಾಯುಕ್ತರ ವರದಿಯಲ್ಲಿ ಬೊಕ್ಕಸಕ್ಕೆ 23 ಕೋಟಿ ರೂ. ನಷ್ಟವಾಗಿದೆ ಎಂದು ವರದಿ ಸಲ್ಲಿಸಿ ವರ್ಷವಾಗುವವರೆಗೂ ಏಕೆ ಸುಮ್ಮನೆ ಕುಳಿತುಕೊಂಡರು ಎಂದು ಪ್ರಶ್ನಿಸಿದ ಧರಂಸಿಂಗ್, ಗುಲ್ಬರ್ಗಕ್ಕೆ ಬಂದಾಗ ಧರಂಸಿಂಗ್ ಅಕ್ರಮ ಗಣಿಗಾರಿಕೆಗೆ ಪರವಾನಿಗೆ ನೀಡಿದ್ದಾರೆ ಎಂದು ಸುಳ್ಳು ಹೇಳಿ ಜನರನ್ನು ದಾರಿ ತಪ್ಪಿಸುವ ಮೂಲಕ ಗುಲ್ಬರ್ಗ ದಕ್ಷಿಣ ಕ್ಷೇತ್ರದ ಚುನಾವಣೆ ಲಾಭ ಪಡೆಯುವ ಕುತಂತ್ರ ನಡೆಸಿದ್ದಾರೆ ಎಂದರು.